ಗದಗ: ವಿದ್ಯಾರ್ಥಿ ಜೀವನದ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದ್ದು, ವಿದ್ಯಾರ್ಥಿಗಳು ಈ ಸಮಯದಲ್ಲಿ ನಿರಂತರ ಅಭ್ಯಾಸ ಮಾಡುವುದರಿಂದ ಉತ್ತಮ ಅಂಕ ಗಳಿಸಲು ಸಾಧ್ಯ, ಉತ್ತಮ ಅಂಕಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ ರ್‍ಯಾಂಕ್ ಪಡೆದು ಭಾರತೀಯ ಆಡಳಿತ ಸೇವೆ ಅಥವಾ ಕರ್ನಾಟಕ ಆಡಳಿತ ಸೇವೆಯಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ ಹೇಳಿದರು.
ಅವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿದರು.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಮುದಾಯದ ಮುಖ್ಯವಾಹಿನಿಗೆ ಕರೆ ತರುವ ಸಲುವಾಗಿ ಸರ್ಕಾರ ಹಲವಾರು ಯೋಜನೆ ಅನುಷ್ಠಾನ ಮಾಡಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉನ್ನತ ವ್ಯಾಸಂಗ ಪೂರೈಸುವ ಸಲುವಾಗಿ ₹10 ಲಕ್ಷ ವರೆಗೂ ಶೈಕ್ಷಣಿಕ ಸಾಲ ನೀಡುವ ಯೋಜನೆ ಜಾರಿಯಲ್ಲಿದೆ. ಪ್ರಾಥಮಿಕ,ಮಾಧ್ಯಮಿಕ, ಪಿಯುಸಿ ಮತ್ತೇ ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಶೈಕ್ಷಣಿಕ ವ್ಯಾಸಂಗ ಪೂರೈಸಿರುವ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಐಎಎಸ್, ಕೆಎಎಸ್ ತರಬೇತಿಗಳನ್ನು ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡುತ್ತಿದ್ದು, ಈ ತರಬೇತಿಯ ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಿ ಎಂದರು.
ಕೆಎಸ್ಎಸ್ ಮಹಾವಿದ್ಯಾಲಯದ ಪ್ರಾ.ಎಂ.ಜಿ. ಗವಾನಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮೆರೆಯಬೇಕಾದರೇ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕಟ್ಟುನಿಟ್ಟಾಗಿ ವಾರದಲ್ಲಿ ಒಂದಿನವಾದರೂ ಮೊಬೈಲ್ ಬಳಕೆ ನಿಷೇದಿಸಬೇಕೆಂದರು.ಜೆ.ಟಿ. ಮಹಾವಿದ್ಯಾಲಯದ ಪ್ರಾ. ಜಿ.ಟಿ.ಪಾಟೀಲ ಮಾತನಾಡಿ, ವ್ಯಕ್ತಿಯ ಬೆಳವಣಿಗೆಯಲ್ಲಿ ಆಧ್ಯಾತ್ಮ ಮತ್ತು ವ್ಯವಹಾರ ಕೌಶಲ್ಯಗಳು ಬೀರುವ ಪಾತ್ರದ ಬಗ್ಗೆ ತಿಳಿ ಹೇಳಿದರು.
ಈ ವೇಳೆ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಪ್ರಾ.ಜೈ ಹನುಮಾನ. ಎಚ್.ಕೆ ಹಾಗೂ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಸವರಾಜ ಬಳ್ಳಾರಿ ಮಾತನಾಡಿದರು.ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ, ಡಾ.ವಿ.ಎ. ಹಿತ್ತಲಮನಿ, ವಸತಿ ನಿಲಯ ಮೇಲ್ವಿಚಾರಕಿ ಶೋಭಾ ಆಲೂರು, ಮಲ್ಲಿಕಾರ್ಜುನಗೌಡ ಪಾಟೀಲ್, ಅಶೋಕ ತುರಮುಂದಿ, ಪತ್ರಕರ್ತ ಸುನೀಲಸಿಂಗ್ ಲದ್ದಿಗೇರಿ ಇದ್ದರು.