ಕಾಯಕದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳಿ-ಕರಡಿ ಸಂಗಣ್ಣ

KannadaprabhaNewsNetwork | Published : Oct 30, 2023 12:31 AM

ಸಾರಾಂಶ

ಅಕ್ಷರ, ಅನ್ನ ಮತ್ತು ಆಧ್ಯಾತ್ಮಿಕ ಪರಿಕಲ್ಪನೆ ಮೂಲಕ ಸರ್ವ ಸಮುದಾಯಕ್ಕೂ ಉದಾತ್ತ ಬದುಕು ನೀಡಿದ್ದ ಬಸವ ತತ್ವ ಪರಂಪರೆ ವಿಶ್ವ ವಿಖ್ಯಾತಿ ಪಡೆದಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಗಂಗಾವತಿ: ಅಕ್ಷರ, ಅನ್ನ ಮತ್ತು ಆಧ್ಯಾತ್ಮಿಕ ಪರಿಕಲ್ಪನೆ ಮೂಲಕ ಸರ್ವ ಸಮುದಾಯಕ್ಕೂ ಉದಾತ್ತ ಬದುಕು ನೀಡಿದ್ದ ಬಸವ ತತ್ವ ಪರಂಪರೆ ವಿಶ್ವ ವಿಖ್ಯಾತಿ ಪಡೆದಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸದಸ್ಯತ್ವಾಭಿಯಾನ ಉದ್ಘಾಟಿಸಿ ಮಾತನಾಡಿದರು.

ಕಾಯಕದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳುವಂತೆ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದು, ಅದರಂತೆ ವೀರಶೈವ ಮಹಾಸಭಾ ಅನ್ನ, ಅಕ್ಷರ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಸಮಾಜಮುಖಿಯಾಗಿದೆ. ವೀರಶೈವ ಉಪಪಂಗಡಗಳು ಒಗ್ಗಟ್ಟಾಗಬೇಕಿದೆ. ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜವನ್ನು ಸದೃಢಗೊಳಿಸಬೇಕಿದೆ. ಅನ್ಯ ಸಮುದಾಯದವರನ್ನು ಪ್ರೀತಿಸುವ ಮತ್ತು ಒಗ್ಗೂಡಿಸುವ ಸಾಮರಸ್ಯ ಬೆಳೆಸುವಂತೆ ಸಲಹೆ ನೀಡಿದರು.

ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸುವುದರ ಜತೆಗೆ ಉನ್ನತ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಾಸಭಾ ಗಟ್ಟಿಗೊಳಿಸಲಾಗುತ್ತಿದ್ದು, ಸದಸ್ಯತ್ವಾಭಿಯಾನದ ಮೂಲಕ ಸಮುದಾಯದವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಭಾವಂತರಿಗೆ ಸನ್ಮಾನದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದರು.

2021-22, 23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗೊಳಿಸಿದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹2000 ನಗದುವಿನೊಂದಿಗೆ ಗೌರವಿಸಲಾಯಿತು.

ಮಹಾಸಭಾ ಸದಸ್ಯತ್ವಾಭಿಯಾನ ಮತ್ತು ಕಾರ್ಯಚಟುವಟಿಕೆ ಕುರಿತು ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ ಮಾತನಾಡಿದರು.

ಹೆಬ್ಬಾಳ ಬೃಹನ್ಮಠದ ನಾಗಭೂಷಣಶಿವಾಚಾರ್ಯರು, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕರಾದ ಅಮರೇಗೌಡ ಭಯ್ಯಾಪುರ, ಜಿ.ವೀರಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಳ್ಳಿ, ಕಾರ್ಯದರ್ಶಿ ವಿಜಯಪಾಟೀಲ್, ಜಿಲ್ಲಾಧ್ಯಕ್ಷ ಶರಣಪ್ಪ ಬಸಪ್ಪ ಹ್ಯಾಟಿ, ಪದಾಧಿಕಾರಿಗಳಾದ ಕವಿತಾಗುರುಮೂರ್ತಿ, ಚಂದ್ರಶೇಖರ್ ಹಿರೇಮಠ, ಕರಿಯಪ್ಪ ಮೇಟಿ, ವೀರೇಶ ಮುಧೋಳ, ರಾಜೇಂದ್ರ ಕುಮಾರ ಶೆಟ್ಟರ್, ಶಿವಪ್ಪ ಯಲಬುರ್ಗಿ ಇತರರಿದ್ದರು. ಶಿಕ್ಷಕರಾದ ಪೂಲಭಾವಿ ಸಿದ್ದಲಿಂಗೇಶ ಮತ್ತು ಲಿಂಗಾರೆಡ್ಡಿ ವಿ.ಆಲೂರು ನಿರ್ವಹಿಸಿದರು.

Share this article