ಹೂವಿನಹಡಗಲಿ: ಸಾಹಿತ್ಯದಿಂದ ಸೌಹಾರ್ದ ಸಮಾಜ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕಿದೆ ಎಂದು ಸಾಹಿತಿ ಇಸ್ಮಾಯಿಲ್ ಯಲಿಗಾರ್ ಹೇಳಿದರು.
ಕವಿ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲುವ ಗಂಭೀರ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು. ಯುದ್ಧ ವಿರೋಧಿ ವಿಷಯ ಹೆಚ್ಚು ಕಾವ್ಯದ ವಸ್ತುವನ್ನಾಗಿಸಿ ಜಾಗೃತಿ ಮೂಡಿಸುವತ್ತ ಚಿತ್ತವಿರಲಿ ಎಂದು ಹೇಳಿದರು.
ಕನ್ನಡ ನಾಡು ಸೌಹಾರ್ದ ಸಮಾನತೆಯ ತವರು. ಬಸವಣ್ಣ, ಕುವೆಂಪು, ಕನಕದಾಸರು, ಶರೀಫರು, ಸಂತರು, ಸೂಫಿಗಳು ಬಿತ್ತಿದ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅನುಸಬೇಕೆಂದು ತಿಳಿಸಿದರು.ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯಗಳು ಸಮಕಾಲೀನ ಚಿಂತನೆಗೆ ಹಚ್ಚುವಂತೆ ವ್ಯಕ್ತವಾಗಿವೆ ಎಂದು ಹಾವೇರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಡಾ.ಪುಷ್ಪಾ ಶಲವಡಿಮಠ ಹೇಳಿದರು.
2023, 2024ರ ಸಿಂಚನ ಕಾವ್ಯ ಪ್ರಶಸ್ತಿಯನ್ನು ಬೀಳಗಿಯ ಸೋಮಲಿಂಗ ಬೇಡರ ಆಳೂರ, ಹುರಕಡ್ಲಿ ಶಿವಕುಮಾರ ಅವರಿಗೆ ₹5 ಸಾವಿರ ನಗದು ಬಹುಮಾನ, ₹2 ಸಾವಿರ ಮೌಲ್ಯದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್, ಪ್ರಕಾಶಕಿ ಸವಿತಾ ಅಂಗಡಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ತೋ.ಮ. ಶಂಕ್ರಯ್ಯ ಮಾತನಾಡಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಮಲ್ಲಿಗೆ ನಾಡಲ್ಲಿ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಿಂಚನ ಪ್ರಕಾಶನದ ಸಾಹಿತ್ಯ, ಓದು ಜನಮೇಜಯ ಪುಸ್ತಕ ಅಭಿಯಾನ ಬಗ್ಗೆ ಸುರೇಶ ಅಂಗಡಿ ವಿವರ ಒದಗಿಸಿದರು.ಚಂದನಾ ಕಲಾ ಬಳಗದ ಎ.ಎಂ.ಪಿ.ಪ್ರಶಾಂತ್, ಜಡೇಶ್ ಕನ್ನಡ ಭಾವಗೀತೆಗಳನ್ನು ಹಾಡಿದರು. ಪತ್ರಕರ್ತ ಎಂ.ದಯಾನಂದ, ನಾಗರಾಜ ಮಲ್ಕಿಒಡೆಯರ್, ನಯನಾ ಅಂಗಡಿ ನಿರ್ವಹಿಸಿದರು. ಇದೇ ವೇಳೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು.
ಟಿ.ಶಂಶಾದ್ ಬೇಗಂ (ಬಿಸಿಯೂಟ), ಶ್ರೀಲತಾ (ವಿಜ್ಞಾನ) ಹಾಗೂ ತುಂಗಭದ್ರಾ ಪ್ರೌಢಶಾಲೆಯ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.