ಸೃಜನಶೀಲತೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ: ಮಂಜುನಾಥ

KannadaprabhaNewsNetwork |  
Published : Mar 30, 2026, 01:30 AM IST
ಪೊಟೋ: 28ಎಸ್‌ಎಂಜಿಕೆಪಿ02ಶಿವಮೊಗ್ಗದ ಇಲ್ಲಿನ ವಿನಾಯಕ ನಗರದ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 248ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ರೋಟರಿ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ದಂಪತಿಗಳು ಸ್ವೀಕರಿಸಿದರು.  | Kannada Prabha

ಸಾರಾಂಶ

ಸೃಜನಶೀಲತೆಯ ಆಕರ್ಷಣೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ ಶಕ್ತಿಯಾಗಿದ್ದು, ಕಳೆದ 248 ತಿಂಗಳಿಂದ ವ್ರತವಾಗಿ ಆಚರಿಸಿಕೊಂಡು ಬಂದಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೃಜನಶೀಲತೆಯ ಆಕರ್ಷಣೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ ಶಕ್ತಿಯಾಗಿದ್ದು, ಕಳೆದ 248 ತಿಂಗಳಿಂದ ವ್ರತವಾಗಿ ಆಚರಿಸಿಕೊಂಡು ಬಂದಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಇಲ್ಲಿನ ವಿನಾಯಕ ನಗರದ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ರೋಟರಿ ಮಿಡ್ ಟೌನ್ ವತಿಯಿಂದ ಶನಿವಾರ ಏರ್ಪಡಿಸಿದ್ದ 248ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ, ಸಾಹಿತ್ಯ ವೇದಿಕೆಗೆ ರೋಟರಿ ನೀಡಿದ ವಿಶೇಷ ಸೇವಾ ಪ್ರಶಸ್ತಿ ಪಡೆದು ಮಾತನಾಡಿದರು.

ರೋಟರಿ ನೀಡಿದ ಈ ಪ್ರಶಸ್ತಿಯನ್ನು ಸಾಹಿತ್ಯ ಹುಣ್ಣಿಮೆಯ ಸಂಘಟನೆಯಲ್ಲಿ ಜೊತೆಯಾಗಿ, ಕೋವಿಡ್ ಸಂದರ್ಭದಲ್ಲಿ ನಿಧನರಾದ ಅಮೂಲ್ಯ ವ್ಯಕ್ತಿತ್ವಗಳಿಗೆ ಸಮರ್ಪಿಸಲು ಇಚ್ಚಿಸುತ್ತೇವೆ. ಆತಿಥ್ಯ ನೀಡುವ ಬಡಾವಣೆಗಳಲ್ಲಿರುವ ಪ್ರತಿಯೊಂದು ಮನೆಗಳಿಗೆ ತೆರಳಿ, ನಮ್ಮ ತಂಡ ಸಾಹಿತ್ಯ ಹುಣ್ಣಿಮೆಯ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುತ್ತದೆ. ಈ ಮೂಲಕ ಸಾಹಿತ್ಯ ಹುಣ್ಣಿಮೆಯತ್ತ ಸೃಜನಶೀಲತೆಯ ಆಕರ್ಷಣೆಯ ಪ್ರಯತ್ನ ಮಾಡುತ್ತಿದ್ದೇವೆ. ತಿಟ್ಹತಿ ತಿರುಗಿ ನೋಡಿದಾಗ, ಶಿವಮೊಗ್ಗ ಜಿಲ್ಲೆಯ ಸತ್ವಕ್ಕೆ ಇರುವ ಶಕ್ತಿ, ನಮ್ಮಲ್ಲಿ ಸದಾ ಕ್ರಿಯಾಶೀಲ ಸಂಘಟನೆಯ ನಿತ್ಯೋತ್ಸವಕ್ಕೆ ಪ್ರೇರಣೆ ನೀಡುತ್ತ ಬಂದಿದೆ ಎಂದು ತಿಳಿಸಿದರು.

ಮಕ್ಕಳ ಸೃಜನಾತ್ಮಕ ಆಲೋಚನೆಗಳನ್ನು, ಇಂಗ್ಲೀಷ್ ಎಂಬ ವ್ಯಾಮೋಹಕ್ಕೆ ಸಿಲುಕಿ ಹಾಳು ಮಾಡಲಾಗುತ್ತಿದೆ‌. ಕನ್ನಡವನ್ನು ರಸವತ್ತಾಗಿ ಪಾಠ ಮಾಡುವತ್ತ ಕನ್ನಡ ಅಧ್ಯಾಪಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ‌. ಹಲವು ಭಾಷೆಗಳನ್ನು ಕಲಿಯಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ರೋಟರಿ ಮಿಡ್ ಟೌನ್ ಅಧ್ಯಕ್ಷ ಹರ್ಷಾ ಕಾಮತ್ ಮಾತನಾಡಿ, ಸಮಾಜದ ಮಾನಸಿಕ ಸ್ಥಿತಿಯನ್ನು ಸರಿಯಾಗಿಡಲು ಸಾಹಿತ್ಯ ಸಾಂಸ್ಕೃತಿಕ ವಾತಾವರಣ ಅತ್ಯವಶ್ಯಕ. ಅಂತಹ ವಾತಾವರಣ ನಿರ್ಮಾಣ ಮಾಡುವಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದ್ದು, ಅಂತಹ ಸಂಘಟನಾ ಶಕ್ತಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ತಮ್ಮ ಅಧ್ಯಕ್ಷ ಅವಧಿಯಲ್ಲಿ ರೋಟರಿ ಸಂಸ್ಥೆಯ ಮೂಲಕ ಸುಮಾರು 80 ಲಕ್ಷ ರುಪಾಯಿ ವೆಚ್ಚದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು‌.

ರೋಟರಿ ಕ್ಲಬ್ ಮಿಡ್ ಟೌನ್ ಯಾನ್ಸ್ ಅಧ್ಯಕ್ಷರಾದ ಪವಿತ್ರ ಹರ್ಷಾ ಕಾಮತ್, ಪ್ರೀತಿ ದೀಪಕ್ ಸಾರತಿ, ಉಜ್ವಲ ರವಿಕುಮಾರ್, ರೋಟರಿ ಮಿಡ್ ಟೌನ್ ಸಹ ಕಾರ್ಯದರ್ಶಿ ಸಂತೋಷ್, ನಿವೃತ್ತ ಪ್ರಾಂಶುಪಾಲ ಡಾ.ಧನಂಜಯ್ ಮತ್ತಿತರರು ಹಾಜರಿದ್ದರು.

ಭದ್ರಾವತಿಯ ಚೌಡಿಕೆ ಕಲಾವಿದರಾದ ಲಕ್ಷ್ಮಣರಾವ್ ಮತ್ತು ತಂಡ ಚೌಡಿಕೆ ಪದ ಹಾಡಿದರು‌. ಗಾಯಕರಾದ ಎಸ್. ನಾರಾಯಣ, ಯಶಸ್ವಿನಿ, ಸಂದೇಶ್ ಭಾವಗೀತೆಗಳನ್ನು ಹಾಡಿದರು. ಡಾ.ನಾಗೇಂದ್ರ ಆಚಾರ್ಯ ಕಥೆ ಹೇಳಿದರು. ಪಿ.ಕೆ. ಸತೀಶ್ ಕವನ ವಾಚಿಸಿ, ಡಾ. ವಿನಯ ಶ್ರೀನಿವಾಸ್ ಚುಟುಕು ವಾಚಿಸಿದರು.

ರೋಟರಿ ಸೇವಾ ಪ್ರಶಸ್ತಿ ಸ್ವೀಕರಿಸಿದ ಮಂಜುನಾಥ ದಂಪತಿ

ರೋಟರಿ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ - 2026 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭಾಜನವಾಗಿದ್ದು, ಸಾಹಿತ್ಯ ಹುಣ್ಣಿಮೆ ವೇದಿಕೆಯಲ್ಲಿ ಅಧ್ಯಕ್ಷ ಡಿ.ಮಂಜುನಾಥ ದಂಪತಿ ಪ್ರಶಸ್ತಿಯನ್ನು ಸ್ವೀಕರಿಸಿದರು. ರೋಟರಿ ಮಿಡ್ ಟೌನ್ ಅಧ್ಯಕ್ಷ ಹರ್ಷಾ ಕಾಮತ್ ಮತ್ತು ಪದಾಧಿಕಾರಿಗಳು ಪ್ರಶಸ್ತಿ ನೀಡಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ: ಅಶೋಕ್
ಶ್ರೀ ಚಂದ್ರಮೌಳೇಶ್ವರಸ್ವಾಮಿ ಅದ್ಧೂರಿ ರಥೋತ್ಸವ