ಬುಲ್ಡೋಜರ್‌ ನ್ಯಾಯವೇ ಬೇರೆ,ಒತ್ತುವರಿ ತೆರವೇ ಬೇರೆ: ಸಿಎಂ

KannadaprabhaNewsNetwork |  
Published : Dec 28, 2025, 02:45 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ವಾಸ್ತವ ಸಂಗತಿ ಬಗ್ಗೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಸ್ತವ ಸಂಗತಿ ಬಗ್ಗೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಿಣರಾಯಿ ವಿಜಯನ್ ಟೀಕೆಗೆ ಎಕ್ಸ್‌ ಖಾತೆ ಮೂಲಕವೇ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿ ಹೇಳಿದ್ದಾರೆ.

ಅಲ್ಲದೇ, ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಅದು ಜನ ವಸತಿಗೆ ಯೋಗ್ಯವಲ್ಲ, ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತೆರವುಗೊಳಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರೊಂದಿಗೆ ಮಾತನಾಡಿ, ಅವರೆಲ್ಲರಿಗೂ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.ಬುಲ್ಡೋಜರ್‌ ಸಂಸ್ಕೃತಿ ನಮ್ಮದಲ್ಲ:

ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದ ಸತ್ಯಾಸತ್ಯತೆ ಅರಿಯದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಲ್ಲದೆ, ಒತ್ತುವರಿ ತೆರವು ಪ್ರಕರಣ ಕುರಿತು ಪಕ್ಷ ಮತ್ತು ಕೇರಳದ ನಮ್ಮ ನಾಯಕರಿಗೆ ವರದಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್‌ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಪಿಣರಾಯಿ ವಿಜಯನ್‌ ಅವರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಕೋಗಿಲು ಬಡಾವಣೆಯಲ್ಲಿ ಒತ್ತುವರಿ ತೆರವು ಮಾಡಿರುವ ಜಾಗವು ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಜಾಗವಾಗಿದೆ. ಅಲ್ಲಿ ಕೆಲವರು ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡಿದ್ದರು ಎಂದರು.ನಮಗೂ ಮಾನವೀಯತೆಯಿದ್ದು, ಒತ್ತುವರಿದಾರರು ಬೇರೆ ಜಾಗಗಳಿಗೆ ಹೋಗಲು ಸರ್ಕಾರ ಮತ್ತು ಸ್ಥಳೀಯ ಶಾಸಕರು ಅವರಿಗೆ ಅವಕಾಶ ನೀಡಿದ್ದೆವು. ಇದೆಲ್ಲ ತಿಳಿಯದ ಪಿಣರಾಯಿ ವಿಜಯನ್‌ ನಮ್ಮ ರಾಜ್ಯದ ವಿಚಾರವಾಗಿ ಹಸ್ತಕ್ಷೇಪ ಮಾಡಬಾರದು. ಭೂ-ಗಳ್ಳರು ಕೊಳಗೇರಿ ನಿರ್ಮಿಸಲು ನಾವು ಬಿಡದೇ, ಭೂಮಿ ರಕ್ಷಣೆ ಮಾಡಿಕೊಳ್ಳುತ್ತೇವೆ. ಅದರಲ್ಲಿ ಯಾರೆಲ್ಲ ಅರ್ಹರಿದ್ದಾರೋ ಅವರಿಗೆ ರಾಜೀವ್‌ ಗಾಂಧಿ ವಸತಿ ಯೋಜನೆ ಅಡಿ ಮನೆ ನೀಡುತ್ತೇವೆ ಎಂದರು.

ಬುಲ್ಡೋಜರ್‌ ಸಂಸ್ಕೃತಿ ನಮ್ಮಲ್ಲಿಲ್ಲ. ನಾವು ಸರ್ಕಾರಿ ಜಮೀನಿನ ರಕ್ಷಣೆ ಮಾಡಿಕೊಂಡಿದ್ದೇವೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಬಿಡುವುದಿಲ್ಲ. ಇಡೀ ಘಟನೆ ಕುರಿತಂತೆ ಪಕ್ಷ ಮತ್ತು ಕೇರಳದ ನಾಯಕರಿಗೆ ವರದಿ ನೀಡುತ್ತೇನೆ. ಇನ್ನು, ಯಾರೆಲ್ಲ ಕರ್ನಾಟಕದಲ್ಲಿ ವಾಸವಿದ್ದು, ದಾಖಲೆ ಹೊಂದಿದ್ದಾರೋ ಅವರಿಗೆ ಕಾನೂನಿನಂತೆ ಅಗತ್ಯ ನೆರವು ನೀಡಲಾಗುವುದು. ಈ ಕುರಿತಂತೆ ಸ್ಪಷ್ಟ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದರು.ಬೆಂಗಳೂರಿನಲ್ಲಿ ಬೇರೆ ನಗರಗಳಂತೆ ಹೆಚ್ಚಿನ ಕೊಳಗೇರಿಗಳಿಲ್ಲ. ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಬಿಡುವುದಿಲ್ಲ. ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿರುವ ಜಾಗ ಇದಾಗಿದ್ದು, ಅವರು ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಜಾಗ ಖಾಲಿಯಿದೆ ಎಂದು ಗುಡಿಸಲು ಹಾಕಿಕೊಳ್ಳಲಾಗದು. ಇದು ಅಲ್ಪಸಂಖ್ಯಾತ ಅಥವಾ ಬೇರೆ ವಿಚಾರವಲ್ಲ. ಬೇರೆ ಸರ್ಕಾರಗಳು ಜನರಿಗೆ ಮನೆ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ನಮ್ಮ ಸರ್ಕಾರ ಬಡವರಿಗೆ ಲಕ್ಷಾಂತರ ಮನೆ ನಿರ್ಮಾಣ ಮಾಡಿದೆ. ಅರ್ಹರಿಗೆ ಸೂಕ್ತ ರೀತಿಯಲ್ಲಿ ಮನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಿಣರಾಯಿ ಹೇಳಿಕೆ ಬೆನ್ನಲ್ಲೇ ಪ್ರತಿಭಟನೆಗಳು ನಡೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಅದೆಲ್ಲವೂ ರಾಜಕೀಯ ಹೇಳಿಕೆ ಮತ್ತು ರಾಜಕೀಯ ಪ್ರೇರಿತ ಪ್ರತಿಭಟನೆಗಳು. ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಕೇರಳದಲ್ಲಿ ಚುನಾವಣೆ ಸಮಯವಾದ ಕಾರಣ ಈ ರೀತಿಯ ರಾಜಕೀಯ ಮಾಡಲಾಗುತ್ತಿದೆ ಎಂದರು.ರಾಜಕೀಯಕ್ಕಾಗಿ ಪಿಣರಾಯಿ ಮಾತು: ಕೇರಳದಲ್ಲಿ ದಲಿತ ಯುವಕನ ಮೇಲೆ ಹಲ್ಲೆಯಾಗಿದ್ದು, ಆ ಬಗ್ಗೆ ಮಾತನಾಡದೆ ಚುನಾವಣೆ ದೃಷ್ಟಿ ಹಾಗೂ ರಾಜಕೀಯಕ್ಕೆ ಬೆಂಗಳೂರಿನ ಶೆಡ್‌ ತೆರವು ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಶೆಡ್‌ ತೆರವು ಮಾಡಲಾಗಿದೆ. ಕಾನೂನು ಬಿಟ್ಟು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕೇರಳದಲ್ಲಿ ದಲಿತ ಯುವಕನನ್ನ ಹೊಡೆದಿದ್ದಾರೆ. ಅದರ ಬಗ್ಗೆ ಅವರು ಮಾತನಾಡಲ್ಲ. ಅವರ ಅಂಗಳದಲ್ಲಿ ಆದ ಘಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಪಕ್ಕದವರ ಮನೆಯ ಅಂಗಳದ ವಿಚಾರಗಳಿಗೆ ಮಾತನಾಡುತ್ತಾರೆ. ಸಹಜವಾಗಿ ರಾಜಕೀಯ ಅಲ್ವಾ ಇದು? ಅವರು ಹಿರಿಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಯಾಕೆ ನಮ್ಮ ರಾಜ್ಯದ ಬಗ್ಗೆ ಮಾತನಾಡ್ತಾ ಇದ್ದಾರೆ? ಕೇರಳದ ಚುನಾವಣೆ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ