ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿಸಲು ಆಗ್ರಹಿಸಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ತಾಲೂಕು ಹೋರಾಟ ಸಮಿತಿಯಿಂದ ಬುಧವಾರ ಎತ್ತಿನಬಂಡಿ ಮೆರವಣಿಗೆ ಮತ್ತು ಬಾರಕೋಲು ಚಳವಳಿ ನಡೆಯಿತು.ಪಟ್ಟಣದ ಎಪಿಎಂಸಿ ಗಣಪತಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಡಬಲ್ ರೋಡ್, ನಡುಚೌಕಿ, ಜವಳಿಬಜಾರ, ಗಾಂಧಿ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಎತ್ತಿನ ಬಂಡಿ ಮೆರವಣಿಗೆ ನಡೆಯಿತು. ಹಲವಾರು ರೈತರು ಎತ್ತಿನಬಂಡಿಗಳಲ್ಲಿ ಬಂದರೆ, ಸ್ಥಳೀಯ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ನಾಗರಿಕರು ಬಾರಕೋಲು ಹಿಡಿದು ಬೇಕೆ ಬೇಕು ತಾಲೂಕು ಬೇಕು, ಎಲ್ಲಿವರೆಗೂ ಹೋರಾಟ ತಾಲೂಕು ಆಗುವವರೆಗೂ ಹೋರಾಟ ಎಂದು ರಸ್ತೆ ಉದ್ದಕ್ಕೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಹೋರಾಟ ಸಮಿತಿಯವರು ನಿರಂತರವಾಗಿ ಪ್ರತಿಯೊಂದು ಹಳ್ಳಿಗಳಿಗೆ, ಸಂಘ ಸಂಸ್ಥೆಗಳಿಗೆ, ಎಲ್ಲ ಸಮುದಾಯಗಳಿಗೆ, ಮುಖಂಡರಿಗೆ, ಸಾರ್ವಜನಿಕರಿಗೆ ಭೇಟಿ ನೀಡಿ ಚಳವಳಿಗೆ ಮನವಿ ಮಾಡಿದ ಪರಿಣಾಮ ಹೋರಾಟಕ್ಕೆ ಸಾವಿರಾರು ಜನ ಬೆಂಬಲಿಸಿ, ತಾಲೂಕಿಗಾಗಿ ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ:ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ.ಎಂ ಭೇಟಿ ನೀಡಿ, ಉಸ್ತುವಾರಿ ಸಚಿವರು ನೀಡಿರುವ ಮಹಾಲಿಂಗಪುರ ಪಟ್ಟಣ ನೂತನ ತಾಲೂಕಿಗೆ ಸೂಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಇಲಾಖೆಗೆ ಬರೆದ ಪತ್ರದ ಸಾರಾಂಶವನ್ನು ತಿಳಿಸಿ, ನೂತನ ತಾಲೂಕಾಗಲು ಪಟ್ಟಣಕ್ಕಿರುವ ಮಾನದಂಡಗಳ ವರದಿ ನಮ್ಮ ಕಾರ್ಯಾಲಯದಿಂದ ಕಂದಾಯ ಇಲಾಖೆಗೆ ರವಾನಿಸಲಾಗಿದೆ. ಪ್ರತಿಭಟನೆ ಕೊನೆಗೊಳಿಸಿ ಮುಂದಿನ ಪ್ರಕ್ರಿಯೆಗೆ ಸಹಕರಿಸಿ ಎಂದು ಹೋರಾಟಗಾರರಿಗೆ ಹೇಳಿದರು.
ಕಾಂಗ್ರೆಸ್ ಮುಖಂಡ ಯಲ್ಲನಗೌಡ ಪಾಟೀಲ ಮಾತನಾಡಿ, ಮಳೆಗಾಲ ಅಧಿವೇಶನ ಅಂತ್ಯದೊಳಗೆ ಉಸ್ತುವಾರಿ ಸಚಿವರ ಮೂಲಕ, ಸಿಎಂ ಸಿದ್ದರಾಮಯ್ಯರ ಭೇಟಿಮಾಡಿ ನೂತನ ತಾಲೂಕಿಗೆ ಒತ್ತಾಯಿಸೋಣ ಎಂದರು. ಪ್ರತಿಭಟನೆಯಿಂದ ಉಸ್ತುವಾರಿ ಸಚಿವರಿಂದ ಸೂಕ್ತ ಸ್ಪಂದನೆ ಮತ್ತು ನಿಲುವು ಸ್ಪಷ್ಟಗೊಂಡು, ಮತ್ತೊಮ್ಮೆ ಸಿಎಂ ಭೇಟಿಗೆ ಮಹತ್ವ ಸಿಕ್ಕಂತಾಗಿದೆ ಎಂದು ಸಚಿವರಿಗೆ ಮತ್ತು ಮುಖಂಡರಿಗೆ, ಎಲ್ಲ ಹೋರಾಟಗಾರರು ಕೃತಜ್ಞತೆ ಸಲ್ಲಿಸಿ ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆ ಅಂತ್ಯಗೊಳಿಸಿದರು.ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಧರೆಪ್ಪ ಸಾಂಗ್ಲಿಕರ, ಸಿದ್ದು ಕೊಣ್ಣೂರ, ಗಂಗಾಧರ ಮೇಟಿ, ರಂಗನಗೌಡ ಪಾಟೀಲ, ಮಹಾಲಿಂಗಪ್ಪ ಸನದಿ, ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಸಿದ್ದು ಶಿರೋಳ ಮತ್ತು ಮಹಾದೇವ ಮಾರಾಪೂರ ತಾಲೂಕು ರಚನೆ ಕುರಿತು ಮಾತನಾಡಿದರು. ಸ್ಥಳೀಯ ಮುಖಂಡರು,ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದ್ದರು. ಎಸ್ಪಿ ಸಿದ್ಧಾರ್ಥ ಗೋಯಲ್, ಎಸಿ ಶ್ವೇತಾ ಬೀಡಿಕರ, ತಹಶಿಲ್ದಾರ ಗಿರೀಶ ಸ್ವಾದಿ, ಡಿಎಸ್ಪಿ ಜಮೀರ ರೋಷನ್, ಸಿಪಿಐ ಸಂಜೀವ ಬಳಗಾರ, ಪಿಎಸ್ಐ ಶಾಂತಾ ಹಳ್ಳಿ, ಸ್ಥಳೀಯ ಪಿಎಸ್ಐ ಕಿರಣ ಸತ್ತಿಗೇರಿ, ಮಧು ಎಲ್. ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಗಡುವು ಮುಗಿದ ಹಿನ್ನೆಲೆ ಪ್ರತಿಭಟನೆಇತ್ತೀಚಿಗೆ ಮಹಾಲಿಂಗಪುರ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಥಳಕ್ಕೆ ಆಗಮಿಸಿ ತಾಲೂಕು ಕುರಿತು ಸ್ಪಷ್ಟತೆ ನೀಡಬೇಕು ಎಂದು ಮಹಾಲಿಂಗಪುರದ ತಾಲೂಕು ಹೋರಾಟ ಸಮಿತಿಯವರು ಆಗ್ರಹಿಸಿದ್ದರು. ಆದರೆ ಕಾರಣಾಂತರಗಳಿಂದ ಸಚಿವರು ಆಗಮಿಸದೆ ಸ್ಥಳೀಯ ಮುಖಂಡರ ಮೂಲಕ ಸಿಎಂ ಸಿದ್ದರಾಮಯ್ಯ ಭೇಟಿಗೆ 10 ದಿನಗಳ ಕಾಲಾವಕಾಶ ಕೋರಿದ್ದರು. ಗಡುವು ಮುಗಿದ ಹಿನ್ನೆಲೆಯಲ್ಲಿ ತಾಲೂಕು ಹೋರಾಟ ಸಮಿತಿ ಮತ್ತೊಮ್ಮೆ ಸಭೆ ಸೇರಿ ಬುಧವಾರ ಎತ್ತಿನಗಾಡಿ ಮೆರವಣಿಗೆ ಮತ್ತು ಬಾರುಕೋಲು ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿತ್ತು.