ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಬಸ್ ಜಪ್ತಿ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದೇ ನ್ಯಾಯಾಲಯದ ಆದೇಶ ತಿರಸ್ಕರಿಸಿದ ಹಾವೇರಿ ವಿಭಾಗದ ಬ್ಯಾಡಗಿ ಡಿಪೋ ಎನ್‌ಡಬ್ಲುಕೆಆರ್‌ಟಿಸಿ ಸಂಸ್ಥೆಯ ಬಸ್‌ವೊಂದನ್ನು ಕುಷ್ಟಗಿ ನ್ಯಾಯಾಲಯ ಜಪ್ತಿ ಮಾಡಿದ ಘಟನೆ ಗುರುವಾರ ನಡೆದಿದೆ.

ಹನುಮಸಾಗರ/ಕುಷ್ಟಗಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದೇ ನ್ಯಾಯಾಲಯದ ಆದೇಶ ತಿರಸ್ಕರಿಸಿದ ಹಾವೇರಿ ವಿಭಾಗದ ಬ್ಯಾಡಗಿ ಡಿಪೋ ಎನ್‌ಡಬ್ಲುಕೆಆರ್‌ಟಿಸಿ ಸಂಸ್ಥೆಯ ಬಸ್‌ವೊಂದನ್ನು ಕುಷ್ಟಗಿ ನ್ಯಾಯಾಲಯ ಜಪ್ತಿ ಮಾಡಿದ ಘಟನೆ ಗುರುವಾರ ನಡೆದಿದೆ.

ಒಂದೇ ಪ್ರಕರಣಕ್ಕೆ ನಾಲ್ಕನೇ ಬಾರಿ ನ್ಯಾಯಾಲಯವು ಜಪ್ತಿ ವಾರಂಟ್ ಜಾರಿ ಮಾಡಿದರೂ ಹಣ ತುಂಬದೇ ಇದ್ದುದರಿಂದ ಸಾರಿಗೆ ಇಲಾಖೆಯ ಬಸ್ ಜಪ್ತಿ ಮಾಡಲಾಗಿದೆ.ಪ್ರಕರಣದ ಕುರಿತು ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ ಮಾತನಾಡಿ, 2016ರಲ್ಲಿ ತಾಲೂಕಿನ ಹನುಮಸಾಗರ-ಇಲ್ಲಕಲ್ ರಸ್ತೆಯ ಮಾರ್ಗದಲ್ಲಿ ಬಸ್ ಅಪಘಾತದಲ್ಲಿ ಹನುಮಸಾಗರ ನಿವಾಸಿ ದಾವಲಬಿ ಹೊಸಮನಿ ಮೃತಪಟ್ಟಿದ್ದರು. ಈ ಕುರಿತು ಕುಷ್ಟಗಿ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದು, ಮೃತರ ಕುಟುಂಬಕ್ಕೆ ₹18.81 ಲಕ್ಷ ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಹಿಂದಿನ ಹಿರಿಯ ದಿವಾಣಿ ನ್ಯಾಯಾಧೀಶ ಹೊನ್ನಸ್ವಾಮಿ ಆದೇಶಿಸಿದ್ದರು.

ಆದರೆ ನ್ಯಾಯಾಲಯ ನೀಡಿದ ಆದೇಶವನ್ನು ಸಾರಿಗೆ ಸಂಸ್ಥೆ ಪಾಲಿಸಿರಲಿಲ್ಲ. ಪುನಃ ನೊಂದವರಿಗೆ ಪರಿಹಾರ ನೀಡುವಂತೆ ಹಿರಿಯ ದಿವಾಣಿ ನ್ಯಾಯಾಧೀಶೆ ಸರಸ್ವತಿದೇವಿ ಆದೇಶಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಬಸ್‌ನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಸಂತ್ರಸ್ತರ ಪರವಾಗಿ ನ್ಯಾಯವಾದಿಗಳಾದ ವಿ.ಕೆ. ಕುಷ್ಟಗಿ, ಆರ್.ಎಸ್. ಗುರುಮಠ, ಎಂ.ಬಿ. ಬಾದರದಿನ್ನಿ, ಲಿಂಗರಾಜ ಅಗಸಿಮುಂದಿನ, ಆರ್.ಎಸ್. ಮೇಟಿ, ಆರ್.ಎಸ್. ಕಂದಗಲ್ ವಾದ ಮಂಡಿಸಿದ್ದರು.ಬಸ್ ಜಪ್ತಿ ವೇಳೆ ನ್ಯಾಯಾಲಯದ ಹಿರಿಯ ಶಿರಸ್ತೇದಾರ ಡಿ.ಗೋವಿಂದರಾಜು, ಲೆಕ್ಕ ಶಿರಸ್ತೇದಾರ ಆದಪ್ಪ, ನೀಲಪ್ಪ, ರವಿಕುಮಾರ್, ಮಂಜುನಾಥ ಇದ್ದರು.

Share this article