- ಕೆಕೆಆರ್‌ಟಿಸಿ ಬಸ್ ಪಲ್ಟಿ । ಅಪಘಾತ ಸ್ಥಳದಿಂದ ಚಾಲಕ, ನಿರ್ವಾಹಕ ಪರಾರಿ ಆರೋಪ
ಕನ್ನಡಪ್ರಭ ವಾರ್ತೆ ಆಳಂದ
ಆಳಂದ– ಭೂಸನೂರ ತಾಂಡಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮಧ್ಯಾಹ್ನ ರಾಜೋಳ ಗ್ರಾಮದ ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರಣ ಕ್ಷಣಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.ಸಂಜೆ ೪.೩೦ರ ವೇಳೆಗೆ ಭೂಸನೂರ ತಾಂಡಾಕ್ಕೆ ತೆರಳುತ್ತಿದ್ದ ಬಸ್ ಜಿಡಗಾ-ರಾಜೋಳ ರಸ್ತೆಯಲ್ಲಿ ಹಠಾತ್ ಪಲ್ಟಿಯಾಯಿತು.
ಗಾಯಾಳುಗಳಲ್ಲಿ ದೀಸಾ ವಿಲಾಸ್ ಚವ್ಹಾಣ (೧೮), ಚಪಳಾಬಾಯಿ ವಿಠ್ಠು ರಾಠೋಡ (೬೦), ಮಹಾದಣ ಫುಲಚಂದ ಪವಾರ (೧೦), ಆರ್ಯನ್ ಜೇಮಸಿಂಗ್ ರಾಠೋಡ, ಅಂಜಲಿ ವಿಜಯಸಿಂಗ್ ರಾಠೋಡ (೧೬), ನಂದಿನಿ ಪ್ರಕಾಶ್ ರಾಠೋಡ, ಮಹಮ್ಮದ್ ಹುಸೇನ್ ಸಲೀಂ ಅಂಬೇವಾಡ (೭) ಸೇರಿದಂತೆ ಹಲವರು ಸೇರಿದ್ದಾರೆ. ಇನ್ನೂ ಕೆಲವರ ಹೆಸರುಗಳು ತಿಳಿದುಬಂದಿಲ್ಲ. ಗಾಯಾಳುಗಳಿಗೆ ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ೧೦೮ ತುರ್ತು ಸೇವೆಗೆ ಕರೆ ಮಾಡಿದರೂ 2 ಗಂಟೆ ಕಾಲ ಆಂಬುಲೆನ್ಸ್ ಸ್ಥಳಕ್ಕೆ ತಲುಪಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಠೋಡ ಆರೋಪಿಸಿದ್ದಾರೆ. ತುರ್ತು ವೈದ್ಯಕೀಯ ಸೇವೆ ಸಿಗದ ಹಿನ್ನೆಲೆ ಗಾಯಾಳುವನ್ನು ಖಾಸಗಿ ಕ್ರೂಸರ್ ವಾಹನಗಳ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಸಂಚರಿಸುತ್ತಾರೆ. ಇಂತಹ ಅಪಘಾತಗಳು ಮರುಕಳಿಸದಂತೆ ಸಾರಿಗೆ ಇಲಾಖೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ತುರ್ತು ವೈದ್ಯಕೀಯ ಸೇವೆಗಳನ್ನು ಸಮಯಕ್ಕೆ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.