ಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ನ್ಯಾಯವಾದಿ ಗೋವಿಂದರಾಜು, ಕವಿತಾ ನೇತೃತ್ವದಲ್ಲಿ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ ಯಸೂಫ್ ಮಿಯಾ, ರಮೇಶ, ಉಸ್ಮಾನ್, ಸೈಯದ್ ಖಾದರ್, ವೆಂಕಟೇಶ ಇತರರು ಕೊಪ್ಪಳ ಘಟಕಕ್ಕೆ ಸೇರಿದ ಬಸ್‌ನ್ನು ಜಪ್ತಿ ಮಾಡಿಕೊಂಡು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣ ಏನು?:2018ರಲ್ಲಿ ಮರಳಿ ಮತ್ತು ಜಂಗಮರ ಕಲ್ಗುಡಿ ಮಧ್ಯೆ ಇರುವ ಟೋಲ್‌ಗೇಟ್ ಸಮೀಪ ನಡೆದಿದ್ದ ರಸ್ತೆ ಅಪಘಾತದಲ್ಲಿ ಜಂಗಮರ ಕಲ್ಗುಡಿ ಗ್ರಾಮದ ಸುರೇಶ ಬಸಪ್ಪ ಹೊಸೂರು (25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ನರಸಪ್ಪ ಗಿಡ್ಡಪ್ಪ ಮಂಗಳಾಪುರ, ಯಮನೂರಪ್ಪ ಲಿಂಗಪ್ಪ ಬಾಲವಂಚಿ, ಹನುಮಂತ ಕಲ್ಗುಡಿ ಎಂಬವರಿಗೆ ಗಾಯಗಳಾಗಿದ್ದವು. ಮೃತ ಸುರೇಶನ ಕುಟುಂಬಕ್ಕೆ ₹ 45 ಲಕ್ಷ ಹಾಗೂ ನರಸಪ್ಪ ಎಂಬ ಗಾಯಾಳುವಿಗೆ ₹ 10ಲಕ್ಷ ಪಾವತಿಸುವಂತೆ 2019ರಲ್ಲಿ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು. ಇನ್ನುಳಿದ ಗಾಯಾಳುಗಳ ಪ್ರಕರಣವು ವಿಚಾರಣೆಯ ಹಂತದಲ್ಲಿದೆ.
ನಿಗದಿತ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಪರಿಹಾರದ ಮೊತ್ತ ಪಾವತಿಸದೇ ಹೋದಲ್ಲಿ ಜಪ್ತಿ ಮಾಡಿದ ವಾಹನವನ್ನು ನ್ಯಾಯಾಲಯ ಹರಾಜು ಮಾಡಲಿದೆ. ನಿರೀಕ್ಷಿತ ಪರಿಹಾರದ ಮೊತ್ತ ಸಿಗದಿದ್ದಲ್ಲಿ ಬಾಕಿ ಮೊತ್ತಕ್ಕೆ ಮತ್ತೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ನ್ಯಾಯಾಲಯ ಸೂಚಿಸಿದೆ.