ಬಂದ್‌ ಆಗಿದ್ದ ಕರ್ನಾಟಕ- ಮಹಾರಾಷ್ಟ್ರ ನಡುವೆ ಪೂರ್ಣ ಪ್ರಮಾಣದ ಬಸ್‌ ಸಂಚಾರ ಪುನಾರಂಭ

KannadaprabhaNewsNetwork | Updated : Feb 28 2025, 10:43 AM IST

ಸಾರಾಂಶ

 ಬಂದ್‌ ಆಗಿದ್ದ ಕರ್ನಾಟಕ- ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ಗುರುವಾರ ಪೂರ್ಣ ಪ್ರಮಾಣದ ಬಸ್‌ ಸಂಚಾರ ಪುನಾರಂಭಗೊಂಡಿದೆ.

 ಬೆಳಗಾವಿ : ಕನ್ನಡ ಮಾತನಾಡು ಎಂದಿದ್ದಕ್ಕೆ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಭಾಷಿಕ ಯುವಕರ ಗುಂಪು ಹಲ್ಲೆ ಘಟನೆಯಿಂದ ಉಂಟಾದ ಭಾಷಾ ವಿವಾದದ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಕರ್ನಾಟಕ- ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ಗುರುವಾರ ಪೂರ್ಣ ಪ್ರಮಾಣದ ಬಸ್‌ ಸಂಚಾರ ಪುನಾರಂಭಗೊಂಡಿದೆ.

ಘಟನೆ ಹಿನ್ನೆಲೆಯಲ್ಲಿ ಕಳೆದ ಐದಾರು ದಿನಗಳಿಂದ ಸ್ಥಗಿತಗೊಂಡಿದ್ದ ಅಂತಾರಾಜ್ಯ ನಡುವಿನ ಬಸ್‌ ಸಂಚಾರ ಆರಂಭವಾಗಿದ್ದು, ಸಹಜಸ್ಥಿತಿಗೆ ಬಂದಿದೆ. ಹೀಗಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಮಸಿ ಬಳಿದು, ಭಗವಾ ಧ್ವಜ ಹಚ್ಚಿ ಉದ್ದಟನ ಪ್ರದರ್ಶಿಸಿದ್ದರು. ರಾಜ್ಯದ ಬಸ್‌ ಚಾಲಕ, ನಿರ್ವಾಹಕರಿಂದ ಒತ್ತಾಯಪೂರ್ವಕವಾಗಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿಸಿದ್ದರು. ಚಾಲಕನಿಗೆ ಕೇಸರಿ ಬಣ್ಣ ಎರಚಿದ್ದರು. ಮಹಾರಾಷ್ಟ್ರದಲ್ಲಿನ ಶಿವಸೇನೆ ಗೂಂಡಾಗಿರಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತ್ತು. ಬಸ್‌ ನಿರ್ವಾಹಕನ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ವಾಪಸ್‌ ಪಡೆಯುವಂತೆ ಹಕ್ಕೊತ್ತಾಯ ಮಾಡಿತ್ತು.

ಭಾಷಾ ಗಲಾಟೆಯಿಂದಾಗಿ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆಯಾ ರಾಜ್ಯದ ಗಡಿವರೆಗೆ ಮಾತ್ರ ಬಸ್‌ ಸಂಚಾರವಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ನಡುವೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮತ್ತು ಕೊಲ್ಲಾಪುರ ಜಿಲ್ಲಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಸ್ ಆರಂಭಿಸಲು ಮಾತುಕತೆ ನಡೆಸಿ ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದಲ್ಲಿ ಬಸ್ ಚಾಲಕರ, ನಿರ್ವಾಹಕರ ಮತ್ತು ಪ್ರಯಾಣಿಕರ‌ ಸುರಕ್ಷತೆಗೆ ಒತ್ತು ಕೊಡುವುದಾಗಿ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು.

ಇದೀಗ ಎರಡು ರಾಜ್ಯದ ‌ನಡುವೆ ಹಂತ ಹಂತವಾಗಿ ಬಸ್ ಸಂಚಾರ ಆರಂಭವಾಗಿದೆ. ಬೆಳಗಾವಿಯಿಂದ ಕೊಲ್ಲಾಪುರ, ಪುಣೆ, ಮುಂಬೈ, ಶಿರಡಿ, ನಾಸಿಕ್ ಗೆ ಬಸ್ ಸೇವೆ ಆರಂಭವಾಗಿದ್ದು, ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಬಸ್ ಸಂಚರಿಸುತ್ತಿವೆ. ಸದ್ಯ ಕೊಲ್ಲಾಪುರದಿಂದ ಸಂಕೇಶ್ವರವರೆಗೂ ಮಹಾರಾಷ್ಟ್ರ ಬಸ್ ಗಳು ಬರುತ್ತಿದ್ದು, ಪೂರ್ಣಪ್ರಮಾಣದ ಬಸ್ ಸಂಚಾರ ಆರಂಭಗೊಂಡಿದೆ.

Share this article