ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಪಟ್ಟಣದ ಉದ್ಯಮಿ ಉಮೇಶ್ ಶೆಟ್ಟಿ ಮನೆಯಲ್ಲಿ 300 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ, 29 ಲಕ್ಷ ರು. ಭಾನುವಾರ ರಾತ್ರಿ ಕಳ್ಳತನವಾಗಿದೆ.ಪಟ್ಟಣದ ಮದ್ದಾನೇಶ್ವರ ವಿದ್ಯಾಸಂಸ್ಥೆ ಹಿಂಭಾಗದ ಬೀದಿಯಲ್ಲಿ ವಾಸವಾಗಿರುವ ಉದ್ಯಮಿ ಉಮೇಶ್ ಶೆಟ್ಟಿ ತಮ್ಮ ಕುಟುಂಬಸ್ಥರೊಂದಿಗೆ ಭಾನುವಾರ ಸಂಜೆ ಮೈಸೂರು ದಸರಾ ಲೈಟಿಂಗ್ಸ್ ನೋಡಲು ಹೋಗಿದ್ದರು. ಉಮೇಶ್ ಶೆಟ್ಟಿ ಮನೆಗೆ ಲಾಕ್ ಮಾಡಿ ಹೋದ ನಂತರ ರಾತ್ರಿ ಸಮಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು, ಮನೆಯ ಹೆಬ್ಬಾಗಿಲ ಲಾಕ್ ರಾಡ್ ನಿಂದ ಮುರಿದು ಪಕ್ಕದಲ್ಲಿಯೇ ಇದ್ದ ರೂಂ ಪ್ರವೇಶಿಸಿ ಬೀರಿನಲ್ಲಿದ್ದ ಚಿನ್ನ, ಬೆಳ್ಳಿ, ಹಣ, ವಾಚ್, ರೇಷ್ಮೆ ಸೀರೆ ಕದ್ದು ಪರಾರಿಯಾಗಿದ್ದಾರೆ.
ಉಮೇಶ್ ಶೆಟ್ಟಿ ಹಾಗೂ ಕುಟುಂಬಸ್ಥರು ಭಾನುವಾರ ರಾತ್ರಿ ಮನೆಗೆ ಬಂದಾಗ ಬಾಗಿಲು ಓಪನ್ ಆಗಿರುವುದು ಕಂಡು ಕೆಲ ಕಾಲ ಹೌ ಹಾರಿದ್ದು, ಮನೆಯೊಳಗೆ ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಕಳ್ಳತನದ ವಿಷಯ ತಿಳಿದು ಪೊಲೀಸ್ ಇನ್ಸ್ ಪೆಕ್ಟರ್ ಎನ್.ಜಯಕುಮಾರ್, ಸಿಬ್ಬಂದಿ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.ಭಾನುವಾರ ಬೆಳಗ್ಗೆ ಕಳ್ಳತನ ನಡೆದ ಸ್ಥಳಕ್ಕೆ ಶ್ವಾನ ದಳ ಆಗಮಿಸಿ, ಮನೆಯಿಂದ ಸ್ವಲ್ಪ ದೂರ ಹೋಗಿ ನಿಂತಿದೆ. ಬಳಿಕ ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು.
ಕಳ್ಳತನವಾದ ಉಮೇಶ್ ಶೆಟ್ಟಿ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಸ್ಥಳೀಯ ಪೊಲೀಸರೊಂದಿಗೆ ಕೆಲ ಸಮಯ ಚರ್ಚಿಸಿ ಕಳ್ಳತನ ಪತ್ತೆ ಹಚ್ಚಲು ಸೂಚನೆ ನೀಡಿದ್ದು, ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದಾರೆ.
ಉದ್ಯಮಿ ಉಮೇಶ್ ಶೆಟ್ಟಿ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಕ್ಯಾಮೆರಾ ಆಳವಡಿಸಿದ್ದರೆ ಕಳ್ಳರ ಪತ್ತೆಗೆ ಸ್ವಲ್ಪ ನೆರವಾಗುತ್ತಿತ್ತು ಎಂಬ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬಂದಿದೆ.ಪಟ್ಟಣದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ರಾತ್ರಿ ಗಸ್ತು ಪೊಲೀಸ್ ಸಿಬ್ಬಂದಿ ಮಾಡುತ್ತಿದ್ದರೂ ಖಡಕ್ಕಾಗಿ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪಟ್ಟಣದಲ್ಲಿ ಗಾಂಜಾ ಘಾಟಿದೆ. ಇದು ಸಹ ಕಳ್ಳತನಕ್ಕೆ ಕಾರಣವಾಗಿರಬಹುದು. ಗಾಂಜಾ ಘಾಟು ಕಡಿಮೆ ಮಾಡಲು ಪೊಲೀಸರು ತುಸು ಖಡಕ್ಕಾಗಿ ವರ್ತಿಸಬೇಕು.