ಸೋಮವಾರಪೇಟೆ: ಐಸಿಎಆರ್-ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿಯಲ್ಲಿ ಹಲವು ವರ್ಷಗಳ ಸಂಶೋಧನೆಯ ಬಳಿಕ ಅಭಿವೃದ್ಧಿಪಡಿಸಲಾದ ‘ಅರ್ಕಾ ಕೂರ್ಗ್ ರವಿ’ ಹಾಗೂ ‘ಅರ್ಕಾ ಸುಪ್ರೀಂ’ ಬೆಣ್ಣೆ ಹಣ್ಣಿನ (ಬಟರ್ ಫ್ರೂಟ್) ಸುಧಾರಿತ ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಸ್. ವಡ್ಡಳ್ಳಿ ಗ್ರಾಮದ ರೈತ ಎಸ್. ರವೀಂದ್ರ ಅವರ ತೋಟದಲ್ಲಿ ಶುಕ್ರವಾರ ಕ್ಷೇತ್ರೋತ್ಸವ ಇತ್ತೀಚೆಗೆ ನಡೆಯಿತು.ಚೆಟ್ಟಳ್ಳಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಈ ಎರಡೂ ತಳಿಗಳನ್ನು 2020 ರಲ್ಲಿ ಬಿಡುಗಡೆಗೊಳಿಸಲಾಗಿದ್ದು, ಉತ್ತಮ ಇಳುವರಿ, ಅತ್ಯುತ್ತಮ ಗುಣಮಟ್ಟದ ಹಣ್ಣು ಹಾಗೂ ವಾಣಿಜ್ಯ ಕೃಷಿಗೆ ಸೂಕ್ತವಾದ ಗುಣಲಕ್ಷಣಗಳಿಂದ ರೈತರ ಮೆಚ್ಚುಗೆ ಗಳಿಸಿವೆ. ಚೆಟ್ಟಳ್ಳಿ ಕೇಂದ್ರದಿಂದ ಇದುವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಕಸಿ ಗಿಡಗಳನ್ನು ರೈತರಿಗೆ ಪೂರೈಕೆ ಮಾಡಲಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಪಡೆದಿವೆ.
ಹಣ್ಣುಗಳ ಯೋಜನಾ ಸಂಯೋಜಕರಾದ ಡಾ. ಪ್ರಕಾಶ್ ಪಾಟೀಲ್ ಹಾಗೂ ಡಾ. ಕರುಣಾಕರನ್ ಬೆಣ್ಣೆ ಹಣ್ಣಿನ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಚೆಟ್ಟಳ್ಳಿ ಕೇಂದ್ರದ ಮುಖ್ಯಸ್ಥರಾದ ಡಾ. ಬಿ.ಎಂ. ಮುರುಳಿದರ್ ‘ಅರ್ಕಾ ಕೂರ್ಗ್ ರವಿ’ ಮತ್ತು ‘ಅರ್ಕಾ ಸುಪ್ರೀಂ’ ತಳಿಗಳ ವೈಶಿಷ್ಟ್ಯಗಳು ಹಾಗೂ ಅವುಗಳ ಸಾಧನೆ ಕುರಿತು ವಿವರಿಸಿದರು.
ಡಾ. ನಯನ್ ದೀಪಕ್ ಗಿಡಗಳ ನಿರ್ವಹಣೆ, ಡಾ. ರಾಣಿ ಎ.ಟಿ. ಕೀಟ ನಿರ್ವಹಣೆ ಹಾಗೂ ಡಾ. ಮಧು ಜಿ.ಎಸ್. ರೋಗಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಹೊನಗಲ್ ವಿದೇಶಿ ಹಣ್ಣಿನ ಬೆಳೆಗಳ ವಾಣಿಜ್ಯ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಲವು ತಜ್ಞರು ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿದರು.ವಿವಿಧ ಬೆಣ್ಣೆ ಹಣ್ಣಿನ ತಳಿಗಳ ಹಣ್ಣುಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಯಶಸ್ವಿಯಾಗಿ ಬೆಣ್ಣೆ ಹಣ್ಣು ಬೆಳೆಸಿದ ಪ್ರಗತಿಪರ ರೈತ ಎಸ್. ರವೀಂದ್ರ ಅವರನ್ನು ಸನ್ಮಾನಿಸಲಾಯಿತು.