ಮಹಿಳೆಯರು ತಯಾರಿಸಿದ ಬೆಣ್ಣೆ ಹಣ್ಣಿನ ಸೂಫ್ಲೆ ಕೇಕ್, ಇಡ್ಲಿ, ಕಾಫಿ, ಸ್ಯಾಂಡ್ವಿಚ್ ಚಟ್ನಿ, ಬ್ರೆಡ್‌ಸ್ಪೆಡ್, ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರೈತರು ಬೆಳೆದ ವಿವಿಧ ಬಗೆಯ ಬೆಣ್ಣೆಹಣ್ಣುಗಳು ಹಾಗೂ ವಿವಿಧ ರೀತಿಯ ಖಾದ್ಯಗಳ ಪ್ರದರ್ಶನವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಯೋಜಿಸಿದ ಬೆಣ್ಣೆ ಹಣ್ಣಿನ(ಬಟರ್ ಫ್ರೂಟ್) ವೈವಿಧ್ಯತೆಯ ಮೇಳ, ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯಲ್ಲಿ ಕೃಷಿಕರ ಗಮನ ಸೆಳೆದವು.
ವಿದೇಶಿ ಹಣ್ಣಿನ ತಳಿಗಳಾದ ಹಾಸ್, ಪಿಂಕರ್ಟನ್, ಜೆಮ್ ಹಾಸ್, ಲಾಂಬ್ ಹಾಸ್, ಮಲೂಮ ಸೇರಿದಂತೆ ದೇಶೀಯ 78 ವಿಧದ ಹಣ್ಣುಗಳು ಹಾಗೂ ಕೇಂದ್ರದ ಸಂಶೋಧಿತ ತಳಿಗಳಾದ ಅರ್ಕಾ ಸುಪ್ರೀಂ, ಅರ್ಕಾ ಕೂರ್ಗ್ ರವಿ ಹಾಗೂ ಟಿಕೆಡಿ ಪ್ರದರ್ಶನಗೊಂಡಿತು.
ಮಹಿಳೆಯರು ತಯಾರಿಸಿದ ಬೆಣ್ಣೆ ಹಣ್ಣಿನ ಸೂಫ್ಲೆ, ಕೇಕ್, ಇಡ್ಲಿ, ಕಾಫಿ, ಸ್ಯಾಂಡ್ವಿಚ್, ಚಟ್ನಿ, ಬ್ರೆಡ್ ಸ್ಪೆಡ್, ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳ ಪ್ರದರ್ಶನ ನಡೆಯಿತು.ಪೊನ್ನಂಪೇಟೆಯ ಸಿಇಟಿ ಕಾಲೇಜಿನ ನಿರ್ದೇಶಕ ಹಾಗೂ ಪ್ರಗತಿಪರ ಬೆಳೆಗಾರ ಕುಪ್ಪಂಡ ಎ. ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ, ಕೊಡಗಿನವರು ಕಾಫಿ ಹಾಗೂ ಕರಿಮೆಣಸು ಬೆಳೆಯನ್ನು ಆದಾಯದ ಮೂಲವಾಗಿ ರೂಪಿಸಿಕೊಂಡಿದ್ದರೂ ಕೊಡಗಿನ ಕಿತ್ತಳೆಗೆ ಹೆಚ್ಚಿನ ಒತ್ತು ನೀಡಿದಿದ್ದರೆ ಕಿತ್ತಳೆ ಬೆಳೆಯನ್ನು ಅಭಿವೃದ್ಧಿಪಡಿಸಬಹುದು ಎಂದರು.ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆಯ ಮಾಜಿ ನಿರ್ದೇಶಕ ದಿನೇಶ್ ಎಂ.ಆರ್. ಮಾತನಾಡಿ, ಕೊಡಗಿನಲ್ಲಿ ಹಲವು ವರ್ಷಗಳಿಂದಲೇ ಬೆಣ್ಣೆಹಣ್ಣನ್ನು ಬೆಳೆಸಲಾಗುತ್ತಿದೆ. ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕೆಂದರು.
ನಿರ್ದೇಶಕ ಡಾ.ಪ್ರಕಾಶ್ ಪಾಟೀಲ್ ಮಾತನಾಡಿ, ಆದಾಯದ ಮೂಲವಾಗಿ ಒಂದೇ ಬೆಳೆಯನ್ನು ಅವಲಂಬಿಸುವ ಬದಲು ವಿವಿಧ ಬೆಳೆಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಣ್ಣು ವಿಭಾಗದ ಮುಖ್ಯಸ್ಥ ಡಾ.ಎಂ. ಶಂಕರ್ ಸ್ವಾಗತಿಸಿದರು. ಕೇಂದ್ರದ ಮುಖ್ಯಸ್ಥ ಡಾ.ಮುರುಳೀಧರ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಣ್ಣೆ ಹಣ್ಣಿನ ಬೇಸಾಯ ಕ್ರಮದ ಬಗೆಗಿನ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.ಕೃಷಿಕ ಡಾ.ದಿನೇಶ್ ಎಂ.ಆರ್. ಹಾಗೂ ಕೆ.ಎ.ಚಿಣ್ಣಪ್ಪ ಅವರನ್ನು ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಲಾಯಿತು.
ವಿಜೇತರಿಗೆ ಬಹುಮಾನ:
ಬೆಣ್ಣೆಹಣ್ಣಿನ ವಿವಿಧ ತಳಿಗಳ ಪ್ರದರ್ಶನದಲ್ಲಿ ವಯನಾಡಿನ ಜೋಸೆಫ್ ಕುರುವಿಳಾ ಪ್ರಥಮ, ಅಭ್ಯತಂಮಗಲದ ಕೆ.ಸಿ.ಉಮೇಶ್ ದ್ವಿತೀಯ, ಮಾದಾಪುರದ ಅನಿಲ್ ಚಂಗಪ್ಪ ತೃತೀಯ ಬಹುಮಾನ ಪಡೆದರು.
ಬೆಣ್ಣೆಹಣ್ಣಿನ ವಿವಿಧ ಖಾದ್ಯಗಳ ವಿಭಾಗದಲ್ಲಿ ಸೋಮವಾರಪೇಟೆಯ ಸಂಧ್ಯಾರಾಣಿ ಪ್ರಥಮ, ಮಡಿಕೇರಿಯ ಅಕ್ಷತಾ ಮುರುಳಿಧರ್ ದ್ವಿತೀಯ, ಚೆಟ್ಟಳ್ಳಿಯ ಪುತ್ತರಿರ ಕರುಣ್ ಕಾಳಯ್ಯ ತೃತೀಯ ಬಹುಮಾನ ಗಳಿಸಿದರು.
ತಾಂತ್ರಿಕ ವಿಷಯ ಮಂಡನೆ:
ಬೆಣ್ಣೆಹಣ್ಣು ಕೊಯ್ಲಿನ ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಬಗ್ಗೆ ಡಾ.ಪ್ರೀತಿ ಪಿ. ಹಾಗೂ ಬೆಣ್ಣೆ ಹಣ್ಣು ಕೃಷಿಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಡಾ. ಮುರಳೀಧರ ಬಿ.ಎಂ. ಮಾಹಿತಿ ನೀಡಿದರು. ನಂತರ ರೈತ -ವಿಜ್ಞಾನಿಗಳ ಸಂವಾದ, ಕ್ಷೇತ್ರ ಬೇಟಿಕಾರ್ಯಕ್ರಮ ನಡೆಯಿತು.ಅರ್ಕಾ ಸುಪ್ರೀಂ ಹಾಗೂ ಅರ್ಕಾ ಕೂರ್ಗ್ ರವಿ ತಳಿಗಳ ಅಭಿವೃದ್ಧಿಗೆ ಕೇಂದ್ರದಿಂದ ಗೋಣಿಕೊಪ್ಪಲಿನ ರಶ್ಮೀ ಅವರಿಗೆ ಲೈಸನ್ಸ್ ನೀಡಲಾಯಿತು. ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಗತಿ ಪರ ರೈತರಾದ ನಡಿಕೇರಿಯಂಡ ಬೋಸ್ ಮಂದಣ್ಣ, ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಕಾಫಿ ಸಂಶೋಧನಾ ಕೇಂದ್ರ ಚೆಟ್ಟಳ್ಳಿ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಮೈಸೂರು, ಸಂಬಾರ ಮಂಡಳಿ ಅಪ್ಪಂಗಳದ ಅಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.