ಎಸ್.ಜಿ. ತೆಗ್ಗಿನಮನಿ
ಈಗ ಸುರಿಯುತ್ತಿರುವ ಮಳೆ ರೈತರಲ್ಲಿ ಹರ್ಷ ಮೂಡಿಸಿದ್ದು, ಬದುವಿನ ಕಂದಕಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದ ಮಳೆಗೆ ಅಲ್ಲಲ್ಲಿ ನೈಸರ್ಗಿಕ ಹೊಂಡಗಳು, ತಗ್ಗು ಪ್ರದೇಶಗಲ್ಲಿ ನೀರು ಸಂಗ್ರಹವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದಡಿ 13 ಗ್ರಾಪಂಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ. ಕೂಲಿಕಾರರಿಗೆ ಕೆಲಸ ಕೊಡುವ ಜತೆಗೆ ರೈತರ ಜಮೀನಿಗೆ ಬದು ನಿರ್ಮಾಣ ಮಾಡಲಾಗಿದೆ. ಸದ್ಯ ಮಳೆನೀರಿಗೆ ಕಂದಕಗಳು ತುಂಬಿಕೊಂಡಿವೆ.ಸುರಕೋಡ ಮುಂದೆ: ತಾಲೂಕಿನ ಸುರಕೋಡ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ₹7 ಲಕ್ಷ ಮೊತ್ತದಲ್ಲಿ 1866 ಮಾನವ ದಿನಗಳ ಸೃಷ್ಟಿಸಿ, 350ಕ್ಕೂ ಅಧಿಕ ಕಂದಕಗಳನ್ನು ನಿರ್ಮಿಸಲಾಗಿದೆ. ಸುರಕೋಡ ಗ್ರಾಮದ ಕಿರು ಜಲಾನಯನ ಯೋಜನೆಯಡಿ ಈಗಾಗಲೇ 890 ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ.
ವಿವಿಧ ಗ್ರಾಮಗಳಲ್ಲಿ ಬದು ನಿರ್ಮಾಣ: ತಾಲೂಕಿನ ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ, ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳ ಮಟ್ಟದ ವರೆಗೂ ಹಂತ ಹಂತವಾಗಿ ರೈತರ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣವಾಗಿವೆ.
ತಾಲೂಕಿನ ಸುರಕೋಡ, ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಬದು ಕಾಮಗಾರಿ ನಿರ್ಮಾಣ ಮಾಡಲು ಈಗಾಗಲೇ ಕಾಮಗಾರಿಗಳು ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ನಿನ್ನೆ ಮೊನ್ನೆ ಸುರಿದ ಮಳೆಗೆ ಕಂದಕಗಳಲ್ಲಿ ಮಳೆ ನೀರು ಸಂಗ್ರಹವಾಗಿವೆ. ಜಮೀನಿನ ಮಣ್ಣು ಮಳೆ ನೀರಿನ ರಭಸಕ್ಕೆ ಹರಿದು ಹೋಗಿಲ್ಲ ಎಂದು ನರಗುಂದ ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.