ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶಕ್ಕಾಗಿ ಬೆಂಗಳೂರಿನ ಉಡುಪಾಸ್ ಸಂಸ್ಥೆ ಜರ್ಮನ್ ಟೆಂಟ್ ಮಾದರಿಯ ಭವ್ಯ ವೇದಿಕೆ ನಿರ್ಮಿಸಿತ್ತು. ಈ ಸಮಾವೇಶದಲ್ಲಿ 2 ಲಕ್ಷ ಕುರ್ಚಿಗಳನ್ನು ಹಾಕಲಾಗಿತ್ತು. ಸಮಾವೇಶಕ್ಕೆ ಲಕ್ಷಾಂತರ ಜನರು ಹರಿದು ಬಂದಿದ್ದು, ಭಾರೀ ಮಳೆಯಲ್ಲೂ ಸಮಾವೇಶ ನಡೆದು, ಯಶಸ್ಸು ಕಂಡಿದೆ. ಈಗ ಈ ಜರ್ಮನ್ ಟೆಂಟ್‌ನ ಭವ್ಯ ವೇದಿಕೆ ತೆರಗೊಳಿಸುವ ಕಾರ್ಯ ಸಾಗಿದೆ.
ಕ್ರೇನ್ ಬಳಕೆ:ಭವ್ಯ ವೇದಿಕೆ ತೆರವು ಮಾಡಲು ಕ್ರೇನ್ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಭಾರೀ ಗಾತ್ರದ ಸಲಾಕೆಗಳು ಮತ್ತು ಫ್ಯಾನ್‌ಗಳನ್ನು ಕೂಡ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ಈಗ ತೆರವು ಮಾಡಲಾಗುತ್ತಿದೆ. ಕಾರ್ಮಿಕರು ಕುರ್ಚಿ ಹಾಗು ಇತರೆ ವಸ್ತುಗಳನ್ನು ಕೂಡ ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.
ಸಮಾವೇಶಕ್ಕೆ ಘಟಾನುಘಟಿ ನಾಯಕರು:
ಈ ಭವ್ಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ ಮತ್ತಿತರರ ನಾಯಕರು ಆಗಮಿಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು, ಮಳೆಯ ನಡುವೆ ಕಾರ್ಯಕ್ರಮ ಯಶಸ್ವಿ ಆಗಿರುವ ಹಿನ್ನೆಲೆ ವಿಜಯನಗರ ಜಿಲ್ಲಾಡಳಿತಕ್ಕೂ ಉತ್ತಮ ಹೆಸರು ಬಂದಿದೆ.20 ಕಿಮೀ ಟ್ರಾಫಿಕ್:
ಹೊಸಪೇಟೆಯ ಮರಿಯಮ್ಮನಹಳ್ಳಿ, ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆ, ಬಳ್ಳಾರಿ ರಸ್ತೆಯ ಪಾಪಿನಾಯಕನಹಳ್ಳಿ ಗ್ರಾಮದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲೆಡೆಯೂ ಜನಸ್ತೋಮ ಇದ್ದುದ್ದರಿಂದ ಸಮಾವೇಶ ಮುಗಿಸಿ ಸಚಿವರು, ಶಾಸಕರು ತೆರಳಲು ಕೂಡ ಪರದಾಡುವಂತಾಗಿತ್ತು. ಇನ್ನು ಸಮಾವೇಶಕ್ಕೆ ಆಗಮಿಸುತ್ತಿದ್ದ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು, ಸಮಾವೇಶಕ್ಕೆ ಬರಲು ಆಗದೇ ಪರದಾಡಿದರು. 20 ಕಿಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಸ್‌ಗಳು, ಟ್ರ್ಯಾಕ್ಸ್‌ಗಳು ರಸ್ತೆಯಲ್ಲಿ ನಿಂತಿದ್ದು, ಸಮಾವೇಶಕ್ಕೆ ಬರುತ್ತಿದ್ದ ಜನರು ರಸ್ತೆಗಳಲ್ಲೇ ನಿಂತಿದ್ದು, ಈ ಕುರಿತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.