ಕನ್ನಡಪ್ರಭ ವಾರ್ತೆ ಭದ್ರಾವತಿ
ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದೊಣಬಘಟ್ಟ, ತಡಸ ಮತ್ತು ಬೆಳಕಿ ಗ್ರಾಪಂ ವ್ಯಾಪ್ತಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ದೊಣಬಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆ ಮತ್ತು ಎಟಿಎಂ ಕೌಂಟರ್ ಕಾರ್ಯಾರಂಭಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.ಜನ್ನಾಪುರ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆವತಿಯಿಂದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಇತ್ತೀಚೆಗೆ ಸಂಸದರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದೊಣಬಘಟ್ಟ, ತಡಸ ಮತ್ತು ಬಿಳಕಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 40,000ಕ್ಕೂ ಅಧಿಕ ಜನಸಂಖ್ಯೆ ಇದ್ದು, ಗ್ರಾಪಂ ವ್ಯಾಪ್ತಿಯಲ್ಲಿ ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಮತ್ತು ಎಟಿಎಂ ಕೌಂಟರ್‌ಗಳು ಇಲ್ಲದೇ ಇರುವುದರಿಂದ ಗ್ರಾಮಸ್ಥರು ದೂರದ ನಗರ ಪ್ರದೇಶಕ್ಕೆ ತೆರಳಬೇಕಾಗುರುವುದರಿಂದ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ದೊಣಬಘಟ್ಟ ಗ್ರಾಮದಲ್ಲಿ ಹೊಸದಾಗಿ ಕೆನರಾ ಬ್ಯಾಂಕ್ ಶಾಖೆ ಪ್ರಾರಂಭಿಸಿ, ಎಟಿಎಂ ಕೌಂಟರ್ ತೆರೆಯುವಂತೆ ಮನವಿಯಲ್ಲಿ ಒತ್ತಾಯಿಸಲಾಗಿತ್ತು.ಈ ಹಿನ್ನೆಲೆ ಸಂಸದರು, ಸ್ಥಳ ತನಿಖೆ ನಡೆಸಿ ಗ್ರಾಮಸ್ಥರಿಗೆ ಹಣಕಾಸಿನ ವಹಿವಾಟು ನಡೆಸಲು ಅನುಕೂಲ ಆಗುವ ದೃಷ್ಟಿಯಿಂದ ಅವಶ್ಯಕತೆ ಇರುವ ಬಗ್ಗೆ ಸರ್ವೇ ನಡೆಸಿ ದೊಣಬಘಟ್ಟ ಗ್ರಾಮದಲ್ಲಿ ಒಂದು ಕೆನರಾ ಬ್ಯಾಂಕ್ ಶಾಖೆ (ಎಟಿಎಂ ಸಹಿತ) ಪ್ರಾರಂಭಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಸಂಸದರಿಗೆ ಕೃತಜ್ಞತೆ: ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಸ್ಪಂದಿಸಿರುವ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಾಗೂ ಟ್ರಸ್ಟ್ ಮತ್ತು ವೇದಿಕೆ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.