ಕನ್ನಡಪ್ರಭ ವಾರ್ತೆ ಚಾಮರಾಜನಗರ ಏ.24ರಂದು ಮಲೆಮಹದೇಶ್ವರರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ನಮ್ಮ ಸ್ವಾಗತವಿದ್ದು, ಈ ಸಭೆಯಲ್ಲಿ ಕಣ್ಣೊರೆಸುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾಧ್ಯಕ್ಷ ಎಸ್.ನಿರಂಜನಕುಮಾರ್ ಆಗ್ರಹಿಸಿದರು.ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಎರಡು ವರ್ಷವಾದರೂ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ, ಡಿಪಿಆರ್ ಆಗಿರುವ ಕೆರೆಗಳ ತುಂಬಿಸುವ ಯೋಜನೆ ಸೇರಿದಂತೆ ಹಲವಾರು ಯೋಜನೆ ತಳಹದಿಗೆ ಬಿದ್ದಿದ್ದು ಅವುಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು. ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ನಿಮ್ಮ ಅಂದಾಜಿನ 32 ಮಂದಿ ಅಸುನೀಗಿದ್ದು, ಆ ಕುಟುಂಬ ವರ್ಗದ ಒಬ್ಬರಿಗೆ ನಮ್ಮ ಸರ್ಕಾರ ಬಂದ ತಕ್ಷಣ ಸರ್ಕಾರಿ ನೌಕರಿ ಕೊಡುವುದಾಗಿ ಹೇಳಿದ್ದೀರಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಮುಂದೆ ಕಣ್ಣೀರು ಸುರಿಸಿದ್ದರು. ಆದರೆ ಇಲ್ಲಿಯವರೆಗೂ ನೌಕರಿ ನೀಡಿಲ್ಲ, ಈ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದರು.ಬಂಡೀಪುರ ರಾತ್ರಿ ಸಂಚಾರದ ಬಗ್ಗೆ ವೈನಾಡು ಸಂಸದೆ ಪ್ರಿಯಾಂಕ ವಾದ್ರಾ ಒತ್ತಡಕ್ಕೆ ಮಣಿದಿರುವ ಸರ್ಕಾರ ಸ್ಪಷ್ಟನೆ ನೀಡದೆ ಗೊಂದಲದ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು. 2017ರಲ್ಲಿ ಉಮ್ಮತ್ತೂರು ಸುತ್ತೂರು ಲಿಪ್ಟ್ ಇರಿಗೇಷನ್‌ಗೆ 280 ಕೋಟಿ ಹಣಕಾಸಿನ ಕೊರತೆ ಇಲ್ಲ, 14 ಕಡೆ ಟವರ್ ನಿರ್ಮಾಣ ಮಾಡಬೇಕಿದೆ. ರೈತರಿಗೆ ಪರಿಹಾರ ನೀಡದೇ ಟವರ್ ನಿರ್ಮಿಸದೇ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ರೈತರಿಗೆ 1.24 ಕೋಟಿ ಪರಿಹಾರವಾಗಿ ಕ್ಯಾಬಿನೆಟ್‌ನಲ್ಲಿ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಎಂದರು.
ಕೊಳ್ಳೇಗಾಲ ದಾಸನಪುರದಿಂದ 13 ಕರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಣೆ ಮಾಡಬೇಕು. ದಾಸನಪುರ ಕೋಟೆಕೆರೆ 210 ಕೋಟಿ, ಹೊಂಗನೂರು ಹಿರಿಕೆರೆ 14.50 ಕೋಟಿ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಚೆಕ್ ಡ್ಯಾಂ ನಿರ್ಮಾಣ ಮಾಡಿ ಆ ಭಾಗದ ಅಂತರ್ಜಲ ವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದರು.ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಇರುವ ಏಳು ನಿಗಮದಲ್ಲಿ ಸಾಧನೆ ಶೂನ್ಯ. ಗಂಗಾಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆ, ಸ್ವಯಂಸಾರಥಿ ದುಡ್ಡು ಬಿಡುಗಡೆಯಲ್ಲಿ ಇಲ್ಲಿಯವರೆ ಒಂದು ಎರಡು, ಅವುಗಳಿಗೂ ಹಣ ಬಿಡುಗಡೆಯಾಗಿಲ್ಲ, ಭೋವಿ ಅಭಿವೃದ್ಧಿ ನಿಗಮ ಹಣ ಬಿಡುಗಡೆಯಾಗಿಲ್ಲ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಗುರಿ ನೀಡಿ, ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ಹೆಸರಿಡುವಂತೆ ಒತ್ತಾಯ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ಎಂ.ರಾಮಚಂದ್ರ, ನಿಜಗುಣ ರಾಜು,, ನಾರಾಯಣಪ್ರಸಾದ್, ಕಾಡಹಳ್ಳಿ ಕುಮಾರ್ ಇದ್ದರು.