ಶಿಗ್ಗಾಂವಿ: ಅನುದಾನದ ಕೊರತೆಯಿಂದ ಶಿಗ್ಗಾಂವಿಯ ವಿವಿಐಪಿ ಪ್ರವಾಸಿಮಂದಿರ ಕಟ್ಟಡ ಸ್ಥಗಿತಗೊಂಡಿತ್ತು. ಒಂದು ಕೋಟಿ ಹೆಚ್ಚುವರಿ ಅನುದಾನ ನೀಡುವ ಮೂಲಕ ಕಟ್ಟಡವನ್ನು ಪೂರ್ಣಗೊಳಿಸಲಾಗಿದೆ. ಕ್ಷೇತ್ರದ ವಿವಿಧ ಯೋಜನೆಗಳಿಗೆ ಈಗಾಗಲೇ ₹೩೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಇನ್ನು ವಿಶೇಷ ಯೋಜನೆಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.ಮಂಗಳವಾರ ಪಟ್ಟಣದ ವಿವಿಐಪಿ ಪ್ರವಾಸಿಮಂದಿರ(ಐಬಿ) ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಹಿಸದೇ ವಿರೋಧಿಸುವವರೇ ಹೊರರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಪ್ರಚಾರ ನಡೆಸಿದ್ದಾರೆ. ಇದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಒಂದೆಡೆ ಟೀಕೆ ಮಾಡುವುದು, ಇನ್ನೊಂದೆಡೆ ಗ್ಯಾರಂಟಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮತದಾರರು ಯಾವ ಗ್ಯಾರಂಟಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದನ್ನು ಅರಿಯಬೇಕು ಎಂದರು.ಸರ್ವ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶದಿಂದ ಸರ್ಕಾರ ಜಾತಿಗಣತಿ, ಜನಗಣತಿ ಮಾಡಲಾಗುತ್ತಿದೆ. ಇದರ ಆಧಾರದ ಮೇಲೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಆತಂಕವೂ ಬೇಡ. ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಯಡಿಯೂರಪ್ಪ ಲಿಖಿತದಲ್ಲಿ ಇದನ್ನು ಒಪ್ಪಿಕೊಂಡು ವರದಿಯನ್ನು ವಿರೋಧಿಸುವುದು ಸರಿಯಲ್ಲ ಎಂದರು.ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಎಸ್. ಖಾದ್ರಿ ಮಾತನಾಡಿ, ಶಿಗ್ಗಾಂವಿಗೆ ಪ್ರವಾಸಿ ಮಂದಿರ ಕಿರೀಟದಂತೆ. ಕೊಟ್ಟ ಮಾತಿನಂತೆ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣ ಮಾಡಿ ಅವರೇ ಉದ್ಘಾಟಿಸಿದ್ದಾರೆ. ವಿಶೇಷ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಸಚಿವ ಜಾರಕಿಹೊಳಿ ಅವರು ನೀಡಿದ್ದಾರೆ ಎಂದರು.ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಲು ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಮನವಿ ಮಾಡಲಾಗಿದೆ. ಅನುದಾನದ ಭರವಸೆ ನೀಡಿದ್ದಾರೆ. ಶಿಗ್ಗಾಂವಿ- ಸವಣೂರು ತಾಲೂಕುಗಳಲ್ಲಿ ₹೨೮೦ ಕೋಟಿಯಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು.ಪಿಡಬ್ಲ್ಯುಡಿ ಅಧಿಕಾರಿ ಸಂಜೀವ ಕುಮಾರ ಹುಲಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಬಂಕಾಪುರ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಸವಣೂರು ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ, ಮುಖಂಡರಾದ ಟಿ. ಈಶ್ವರ, ಸುಭಾಸ್ ಮಜ್ಜಗಿ, ಶಿವಾನಂದ ರಾಮಗೇರಿ, ಪ್ರೇಮಾ ಪಾಟೀಲ, ಎಸ್.ಎಫ್. ಮಣಕಟ್ಟಿ, ಗೌಸಖಾನ್ ಮುನಶಿ, ಎಂ.ಜೆ. ಮುಲ್ಲಾ ಗುಡ್ಡಪ್ಪ ಜಲದಿ, ದರ್ಶನ ಲಮಾಣಿ, ಮಲ್ಲಮ್ಮ ಸೋಮನಕಟ್ಟಿ, ರವಿ ಕೋಣಪ್ಪನವರ ಇತರರು ಇದ್ದರು.