ಆರೋಪಿ ಬಳ್ಳಾರಿಯಲ್ಲಿಯೇ ತಲೆ ಮರೆಸಿಕೊಂಡಿರಬಹುದೇ ಎಂಬ ಗುಮಾನಿ ಮೇರೆಗೆ ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿಯೇ ಉಳಿದು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೌಲ್‌ಬಜಾರ್, ಮುಲ್ಲಾರ್‌ಪೇಟೆ ಮತ್ತಿತರ ಕಡೆಗಳಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದಾರೆ.ಏತನ್ಮಧ್ಯೆ ಎನ್‌ಐಎ ಅಧಿಕಾರಿಗಳು ಆರೋಪಿ ಗುರುತು ಹಿಡಿಯಲು ಸಾರ್ವಜನಿಕರನ್ನು ಮಾತನಾಡಿಸಿ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಎನ್‌ಐಎ ಅಧಿಕಾರಿಗಳು ಎರಡು ತಂಡಗಳನ್ನು ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಒಂದು ತಂಡ ಹಾಗೂ ಮತ್ತೊಂದು ತಂಡ ನಗರದ ನಾನಾ ಕಡೆ ಸುತ್ತಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಂಕಿತ ಆರೋಪಿ ಬಳ್ಳಾರಿಗೆ ಬಂದಿರುವುದು ಸ್ಪಷ್ಟವಾಗಿದ್ದು, ಮಾ. 1ರಂದು ಬಸ್ ನಿಲ್ದಾಣದಲ್ಲಿ ಓಡಾಡಿರುವುದು ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಿಂದ ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಸುತ್ತಮುತ್ತಲ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆಯಿದೆ.ಶಂಕಿತನ ಪತ್ತೆಗಾಗಿ ತೀವ್ರ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.ವಿಜಯನಗರದಲ್ಲೂ ಸಿಸಿ ಕ್ಯಾಮೆರಾ ಪರಿಶೀಲನೆಗುಪ್ತಚರ ಇಲಾಖೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ವಿಜಯನಗರ ಜಿಲ್ಲೆಯ ಬಸ್ ನಿಲ್ದಾಣಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಶುಕ್ರವಾರ ಕೂಡ ಪರಿಶೀಲನೆ ನಡೆಸಿದರು.ಬಳ್ಳಾರಿಯಲ್ಲಿ ಉಗ್ರಗಾಮಿ ಕಂಡುಬಂದ ಹಿನ್ನೆಲೆ ಎನ್‌ಐಎ ವಿಜಯನಗರ ಜಿಲ್ಲಾ ಪೊಲೀಸರಿಗೂ ಅಲರ್ಟ್ ಸಂದೇಶ ರವಾನೆ ಮಾಡಿದ್ದು, ಹೀಗಾಗಿ ನಗರದ ಬಸ್ ನಿಲ್ದಾಣ ಸೇರಿದಂತೆ ಕೂಡ್ಲಿಗಿ, ಹೊಸಪೇಟೆ, ಕಾನಾಹೊಸಳ್ಳಿ, ಮರಿಯಮ್ಮನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು.ರಾಮೇಶ್ವರಂ ಕೆಫೆ ಸ್ಫೋಟ ಮಾಡಿದ ಬಳಿಕ ಉಗ್ರಗಾಮಿ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿ ಬಳ್ಳಾರಿಗೆ ಬಂದಿದ್ದು, ಅಲ್ಲಿಂದ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎನ್‌ಐಎ ಸೂಚನೆ ಮೇರೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಸ್ಫೋಟದ ಮ್ಯಾಡುಲ್‌ನ ಜಾಡು ಹಿಡಿದು ತೀವ್ರ ತನಿಖೆ ನಡೆಸುತ್ತಿದ್ದಾರೆ.