ರಾಮನಗರ: ಹೊಸ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಲೋಚನೆ. ಹೀಗಾಗಿ ಶೇಕಡ 60ರಷ್ಟು ಹೊಸಬರು ಮತ್ತು ಶೇಕಡ 40ರಷ್ಟು ಹಳೆ ಶಾಸಕರಿಗೆ ಸಚಿವ ಸ್ಥಾನ ಕೊಡುವ ಲೆಕ್ಕಾಚಾರವಿದ್ದು, ಅದರಂತೆ ಸಂಪುಟ ವಿಸ್ತರಣೆ ಆಗಬಹುದು. ಅದರಲ್ಲಿ ನನಗೂ ಮಂತ್ರಿಗಿರಿ ಸಿಗುವ ವಿಶ್ವಾಸವಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.
ಸಾಕಷ್ಟು ಶಾಸಕರೂ ಸಹ ಅಭಿಪ್ರಾಯ ಹೇಳಲು ದೆಹಲಿಗೆ ಹೋಗಿದ್ದಾರೆ. ಆದರೆ, ಅವರನ್ನು ಒಳಗಡೆ ಬಿಡುವುದಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತು ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ಯಾರಿಗೂ ಮಾತು ಕೊಟ್ಟಿಲ್ಲ. ಇದರಲ್ಲಿ ರಾಹುಲ್ ಗಾಂಧಿ ತೀರ್ಮಾನವೇ ಅಂತಿಮ.ಈಗಾಗಲೇ ಹೈಕಮಾಂಡ್ ಗೆ ಇಲ್ಲಿನ ರಿಪೋರ್ಟ್ ಸಿಕ್ಕಿದೆ. ಅದರಂತೆ ಅವರು ನಿರ್ಧಾರ ಮಾಡುತ್ತಾರೆ ಎಂದು ಉತ್ತರಿಸಿದರು.
ಸಂಪುಟ ರಚನೆ ಬಳಿಕೆ ಸಮಿತಿ ರಚನೆ:
ಇನ್ನೆರಡು ಕಂದಾಯ ಗ್ರಾಮಗಳ ಅಂತಿಮ ನೋಟಿಫಿಕೇಷನ್ ಆಗಬೇಕು. ಈ ಬಗ್ಗೆ ಚರ್ಚೆ ಆಗುತ್ತಿದೆ. ಟೌನ್ ಶಿಪ್ ವಿರೋಧ ಇರುವವರನ್ನೂ ವಿಶ್ವಾಸಕ್ಕೆ ಪಡೆಯಬೇಕು ಎಂಬುದು ಮುಖ್ಯಮಂತ್ರಿಗಳ ಸೂಚನೆ. ಹಾಗಾಗಿ ಎಲ್ಲರನ್ನೂ ವಿಶ್ವಾಸ ಪಡೆಯುವ ಕೆಲಸ ಮಾಡುತ್ತಿದ್ದೇವೆ. ಸಚಿವ ಸಂಪುಟ ರಚನೆ ಗೊಂದಲದ ಬಳಿಕ ಈ ಬಗ್ಗೆ ಸಮಿತಿ ರಚನೆ ಆಗಲಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಸಮಸ್ಯೆ ಆಲಿಸಿ, ಅವರಿಗೆ ಬೇರೆ ಅನುಕೂಲ ಮಾಡಿಕೊಡುವ ಬಗ್ಗೆ ಸಮಿತಿ ಚರ್ಚೆ ಮಾಡಲಿದೆ ಎಂದರು.
ಜಿಲ್ಲೆಯಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೂ ರೈತರ ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಇದೆಲ್ಲಾ ಊಹಾಪೋಹಗಳು. ವಿಮಾನ ನಿಲ್ದಾಣದ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ಎಲ್ಲಿ ಆಗಬೇಕು ಅನ್ನೋದನ್ನು ಕೇಂದ್ರ ಸರ್ಕಾರವೇ ಅಂತಿಮ ಮಾಡುತ್ತದೆ. ನಾವು ಎರಡು-ಮೂರು ಕಡೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಟೆಕ್ನಿಕಲ್ ಆಗಿ ಎಲ್ಲಿ ಅನುಕೂಲ ಇದೆ ಅಲ್ಲಿ ವಿಮಾನ ನಿಲ್ದಾಣ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೂಟಗಲ್ - ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್ ಮತ್ತಿತರರು ಇದ್ದರು.
ರಾಮನಗರದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೂಟಗಲ್ - ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್ ಮತ್ತಿತರರಿದ್ದರು.