- ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್: ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಕೌಶಲ್ಯಾಧಾರಿತ ತರಬೇತಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಒತ್ತು ನೀಡಿದೆ ಎಂದು ದಾವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಿಸ್ತೀಯ ಶಿಕ್ಷಣ, ವೃತ್ತಿ ಆಧಾರಿತ, ಕೌಶಲ್ಯಯುತ, ಉದ್ಯೋಗ ಸೃಜನೆಯ ಪದವಿಗಳನ್ನು ನೀಡುವ ಉದ್ದೇಶವನ್ನು ದಾವಿವಿ ಹೊಂದಿದೆ ಎಂದರು.

ಕೌಶಲ್ಯಾಧಾರಿತ ತರಬೇತಿಗೆ ದಾವಿವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಿದೆ. ಇದರಿಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಆಸಕ್ತಿಯ ವಿಷಯದಲ್ಲಿ ಸಂಪೂರ್ಣ ತರಬೇತಿ ನೀಡಿ, ವೃತ್ತಿ, ಸ್ವಯಂ ಉದ್ಯೋಗಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಅವರು ಹೇಳಿದರು.


ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ (ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಅಧ್ಯಯನ ವಿಭಾಗ), ಪಿಜಿ ಡಿಪ್ಲೊಮಾ ಇನ್ ಫೈನಾನ್ಷಿಯಲ್ ಸರ್ವೀಸ್ (ವಾಣಿಜ್ಯ ಶಾಸ್ತ್ರ), ಪಿಜಿ ಡಿಪ್ಲೊಮಾ ಇನ್ ಡೇಟಾ ಅನಾಲಿಸಿಸ್ (ಅರ್ಥ ಶಾಸ್ತ್ರ), ಪಿಜಿ ಡಿಪ್ಲೊಮಾ ಇನ್ ಫುಡ್ ಪ್ರೊಸೆಸಿಂಗ್, ಸೇಫ್ಟಿ ಅಂಡ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ (ಆಹಾರ ತಂತ್ರಜ್ಞಾನ), ಡಿಪ್ಲೊಮಾ ಇನ್ ಯೋಗ (ಯೋಗ ವಿಜ್ಞಾನ), ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ (ಯೋಗ ವಿಜ್ಞಾನ)ದಲ್ಲಿ ಅಧ್ಯಯನ ಮಾಡಬಹುದು ಎಂದು ಅವರು ವಿವರಿಸಿದರು.

ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಶಿಕ್ಷಣ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿವಿಧ ಕೋರ್ಸ್‌ಗಳಲ್ಲಿ ಕೌಶಲ್ಯಾಧಾರಿತ ಪ್ರಾಯೋಗಿಕ ಶಿಕ್ಷಣದ ಸರ್ಟಿಫಿಕೇಟ್ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ದಾವಿವಿ ವಿದ್ಯಾರ್ಥಿಗಳು ಉದ್ಯೋಗ ಅರಸಿ ಹೋಗುವ ಬದಲು ಉದ್ಯಮಶೀಲರಾಗಿ, ಉದ್ಯೋಗದಾತರಾಗಬೇಕು, ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪದವಿಯೊಂದಿಗೆ ಆತ್ಮವಿಶ್ವಾಸ ತುಂಬುವ ಕೆಲಸ ದಾವಿವಿ ಮಾಡಲಿದೆ ಎಂದು ಅವರು ತಿಳಿಸಿದರು.

ಉದ್ಯೋಗದಾತರಾಗಲು ವೃತ್ತಿ ತರಬೇತಿ ಕೋರ್ಸ್ ನೆರವಾಗಲಿವೆ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳು, ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ವೃತ್ತಿ ಕೌಶಲ್ಯದ ಜೊತೆ ಸಂಶೋಧನೆಗೂ ವಿವಿ ಆದ್ಯತೆ ನೀಡಿದೆ. ಈಗಾಗಲೇ ವಿವಿ ಪ್ರಾಧ್ಯಾಪಕರು ವಿದೇಶಿ ವಿವಿಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವಿವಿಗಳ ಜೊತೆ ಸಂಶೋಧನಾ ಒಡಂಬಡಿಕೆಯೂ ಆಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆಗೆ ಲಭ್ಯ ಎಲ್ಲ ಸಂಪನ್ಮೂಲಗಳನ್ನು ಬಳಸಿ, ದಾವಿವಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಅಥವಾ ಉದ್ಯೋಗಸ್ಥ ಯುವಜನರ ಪದವಿ ಕನಸನ್ನು ಸಾಕಾರಗೊಳಿಸುವ ಉದ್ದೇಶ ದಾವಿವಿಯದ್ದು. ಯುಜಿಸಿ ನಿಯಮಾವಳಿ ಮತ್ತು ರಾಜ್ಯ ಸರ್ಕಾರದ ನೀತಿ ನಿರ್ಧಾರಗಳನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ, ಇ-ಲರ್ನಿಂಗ್ ಮತ್ತು ಹೈಬ್ರಿಡ್ ಬೋಧನಾ ವ್ಯವಸ್ಥೆಯನ್ನು ಕಲ್ಪಿಸುವ ಕೊಡುವ ಉದ್ದೇಶವೂ ದಾವಣಗೆರೆ ವಿವಿ ಹೊಂದಿದೆ ಎಂದು ಪ್ರೊ.ರಂಗಸ್ವಾಮಿ ತಿಳಿಸಿದರು.

ದಾವಿವಿ ಹಣಕಾಸು ಅಧಿಕಾರಿ ಪ್ರೊ. ಆರ್.ಶಶಿಧರ, ಸಮಾಜ ವಿಜ್ಞಾನ ನಿಕಾಯದ ಪ್ರೊ.ಎಂ.ಯು.ಲೋಕೇಶ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ನಿಕಾಯದ ಡೀನ್ ಪ್ರೊ. ಕೆ.ಟಿ.ಶ್ರೀನಿವಾಸ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸತೀಶ್ ವಲ್ಲೇಪುರೆ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶಿವಕುಮಾರ ಕಣಸೋಗಿ ಇತರರು ಇದ್ದರು.

- - -

(ಬಾಕ್ಸ್‌)

* ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅವಧಿ ವಿಸ್ತರಣೆ

- ದಾವಿವಿಯಲ್ಲಿ 129 ಪೂರ್ಣಾವಧಿ ಅಧ್ಯಾಪಕರು, ಅವಳಿ ಜಿಲ್ಲೆಯಲ್ಲಿ 128 ಸಂಯೋಜಿತ ಕಾಲೇಜು ದಾವಣಗೆರೆ: ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ದಾವಣಗೆರೆ ವಿಶ್ವವಿದ್ಯಾನಿಲಯವು ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸಲು ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದು, ಆಗಸ್ಟ್ 10ರವರೆಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ದಾವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾ ಮಿ ತಿಳಿಸಿದರು.

ನಗರದಲ್ಲಿ ಮಂಗಳ‍ವಾರ ಸುದ್ಗಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಿವಿಯಲ್ಲಿ ಎಂಎ., ಎಂಕಾಂ, ಎಂಎಸ್ಸಿ, ಎಂಇಡಿ, ಎಂಎಫ್‌ಎ, ಎಂಎಸ್‌ಡಬ್ಲ್ಯು, ಎಂಸಿಎ ಪದವಿಗಾಗಿ ಪ್ರವೇಶ ನೀಡುತ್ತಿದ್ದು, ಅರ್ಹ, ಆಸಕ್ತ ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಬಹುದು. ಅರ್ಜಿ ಸಲ್ಲಿಸಲು ಜು.31 ಕಡೆಯ ದಿನವಾಗಿದ್ದು, ವಿದ್ಯಾರ್ಥಿಗಳು, ಕಾಲೇಜು ಪ್ರಾಂಶುಪಾಲರ ಮನವಿ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಆ.10ರವರೆಗೆ ವಿಸ್ತರಿಸಲಾಗಿದೆ ಎಂದರು.

ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆಯಬಹುದಾಗಿದೆ. ವಿ.ವಿ.ಯಲ್ಲಿ 129 ಪೂರ್ಣಾವಧಿ ನುರಿತ, ತಜ್ಞ, ಅನುಭವಿ ಅಧ್ಯಾಪಕರಿದ್ದಾರೆ. ಸುಸಜ್ಜಿತ ಪ್ರಯೋಗಾಲಯಗಳಿದ್ದು, ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸ್ನಾತಕೋತ್ತರ ಪದವಿಯ 30 ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶವಿದ್ದು, ದಾವಣಗೆರೆಯ ಶಿವಗಂಗೋತ್ರಿ ಆವರಣ ಮತ್ತು ಚಿತ್ರದುರ್ಗದ ಗುಡ್ಡದ ರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲೂ ಅಧ್ಯಯನಕ್ಕೆ ಅವಕಾಶವಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಿರುವ ಹಾಸ್ಟೆಲ್, ಡಿಜಿಟಲ್ ಗ್ರಂಥಾಲಯ, ವೃತ್ತಿ ಮಾರ್ಗದರ್ಶನ ವ್ಯವಸ್ಥೆ ಒದಗಿಸಲಾಗಿದೆ. ವಿವಿ ವ್ಯಾಪ್ತಿಯ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟು 128 ಸಂಯೋಜಿತ ಕಾಲೇಜುಗಳಿವೆ. ವಿವಿಧ ವಿಭಾಗಗಳಲ್ಲಿ 30 ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಸದ್ಯ ವಿವಿಧ ಪದವಿ ಕೋರ್ಸ್‌ಗಳಲ್ಲಿ ಸುಮಾರು 2200 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

- - -

(ಟಾಪ್‌ ಕೋಟ್‌) ದಾವಣಗೆರೆ ವಿವಿ ಸರ್ಕಾರಿ ಸ್ವಾಮ್ಯದ ವಿವಿಯಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು, ಇದನ್ನು ವಿದ್ಯಾರ್ಥಿಸ್ನೇಹಿ ವಿ.ವಿ.ಯಾಗಿಸುವುದು ಪ್ರಮುಖ ಉದ್ದೇಶವಾಗಿದೆ. ದಾವಿವಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಶ್ರಮದಿಂದ ತನ್ನ ಯುಜಿ ಪರೀಕ್ಷಾ ಫಲಿತಾಂಶಗಳನ್ನು ಅತ್ಯಂತ ವೇಗವಾಗಿ ಪ್ರಕಟಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. - ಪ್ರೊ. ಬಿ.ಇ.ರಂಗಸ್ವಾಮಿ, ಕುಲಪತಿ, ದಾವಿವಿ.

- - -

-28ಕೆಡಿವಿಜಿ3, 4: ದಾವಣಗೆರೆಯಲ್ಲಿ ಮಂಗಳವಾರ ದಾವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.