- ಐಬಿ ಮಲಗುಂಡಿ ಸ್ವಚ್ಛಗೊಳಿಸಿದ ಇಬ್ಬರು ಕಾರ್ಮಿಕರು
- ಪಿಡಬ್ಲ್ಯುಡಿ ಎಇಇ ಸೇರಿ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹ - - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ಹಳೇ ಪ್ರವಾಸಿ ಮಂದಿರದ ಒಳಚರಂಡಿ (ಯುಜಿಡಿ)ಯ ಮಲಗುಂಡಿಯನ್ನು ಕಾರ್ಮಿಕರಿಂದ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ, ಕೈಯಿಂದ ಸ್ವಚ್ಛಗೊಳಿಸುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ ಡಿಎಸ್‌ಎಸ್ ಜಿಲ್ಲಾ ಪದಾಧಿಕಾರಿಗಳು, ಮುಖಂಡರು, ಜು.27ರಂದು ಮಧ್ಯಾಹ್ನ 12.30ರ ವೇಳೆ ದಾವಣಗೆರೆ ಪ್ರವಾಸಿ ಮಂದಿರದಲ್ಲಿ ಯುಜಿಡಿ ಮಲಗುಂಡಿಯನ್ನು ಸ್ವಚ್ಛಗೊಳಿಸುವಲ್ಲಿ ಗಂಭೀರ ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಿದರು.
ಮುಖಂಡರು ಮಾತನಾಡಿ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್‌ರಾಜ್ ದೂರವಾಣಿ ಮೂಲಕ ಚನ್ನಮ್ಮಲ್ಲಪ್ಪ ಎಂಬವರಿಗೆ ಕರೆ ಮಾಡಿ, ಪ್ರವಾಸಿ ಮಂದಿರದ ಮಲಗುಂಡಿ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. ಅನಂತರ ಚನ್ನಮಲ್ಲಪ್ಪ ಇಬ್ಬರು ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿಕೊಂಡು, ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಮಲಗುಂಡಿ ಸ್ವಚ್ಛ ಮಾಡಿಸಿದ್ದಾರೆ. ಶೂಗಳು, ಕೈಗವಸುಗಳು, ಮಾಸ್ಕ್, ಸುರಕ್ಷತಾ ಉಡುಪು, ಆಮ್ಲಜನಕ ವ್ಯವಸ್ಥೆ ಅಥವಾ ಇತರೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಿಲ್ಲ ಎಂದರು.
ಕೈಯಿಂದಲೇ ಇಬ್ಬರು ಕಾರ್ಮಿಕರಿಂದ ಮಲಗುಂಡಿ ಸ್ವಚ್ಛಗೊಳಿಸಿರುವುದು ಅಕ್ಷಮ್ಯ ಅಪರಾಧ. ಈ ಕೃತ್ಯವು ಮಾನವ ಮಲವನ್ನು ಕೈಯಿಂದ ಸ್ವಚ್ಛಗೊಳಿಸುವುದನ್ನು ನಿಷೇಧಿಸುವ ಸಂಬಂಧಿತ ಸುರಕ್ಷತಾ ನಿಯಮಗಳ 2013ರ ಎಂಎಸ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಘಟನೆ ಕುರಿತಂತೆ ಉನ್ನತಮಟ್ಟದ ತನಿಖೆ ನಡೆಸಬೇಕು. ಪಿಡಬ್ಲ್ಯುಡಿ ಎಇಇ ವಿನಯ್‌ರಾಜ್ ಮತ್ತು ಚನ್ನಮಲ್ಲಪ್ಪ ವಿರುದ್ಧ ಸೆಕ್ಷನ್ 8ರ ಅಡಿಯಲ್ಲಿ ಅನ್ವಯವಾಗುವ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಂಡು, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮಲಗುಂಡಿಯನ್ನು ಸ್ವಚ್ಛಗೊಳಿಸಿದ ಕಾರ್ಮಿಕರ ಹೇಳಿಕೆಯನ್ನು ದಾಖಲಿಸಿ, ಆ ಇಬ್ಬರಿಗೂ ವೈದ್ಯಕೀಯ ತಪಾಸಣೆ ಮಾಡಿಸಿ, ಸೂಕ್ತ ಪರಿಹಾರ ಒದಗಿಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸಿ ಮಂದಿರಗಳಲ್ಲಿ ಮಾನವ ಮಲ ಸ್ವಚ್ಛಗೊಳಿಸುವ ಪದ್ಧತಿ ಸಂಪೂರ್ಣ ನಿಲ್ಲಿಸಿರುವುದನ್ನು, ನಿಷೇಧಿಸಿರುವುದನ್ನು ಖಚಿತಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾರ್ಮಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಡಿಎಸ್‌ಎಸ್ ಮುಖಂಡರು ಒತ್ತಾಯಿಸಿ ಮನವಿ ಅರ್ಪಿಸಿದರು.ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ.ಕಡೇಮನಿ, ಸಂಘಟನಾ ಸಂಚಾಲಕರಾದ ಟಿ.ರವಿಕುಮಾರ, ಖಜಾಂಚಿ ಎಚ್.ಮಲ್ಲಿಕಾರ್ಜುನ ವಂದಾಲಿ, ಆರ್.ಪ್ರಭಾಕರ ಪಾಂಡೋಮಟ್ಟಿ, ಎಂ.ರವಿ ಕೆಟಿಜೆ ನಗರ, ಜಿ.ಎಚ್.ತಮ್ಮಣ್ಣ ದಿಡಗೂರು, ಎ.ಕೆ.ರಮೇಶ, ಸುರೇಶ ಎಚ್ಕೆಆರ್ ನಗರ, ರುದ್ರೇಶ ಕೆಂಚಮ್ಮನಹಳ್ಳಿ ಇತರರು ಇದ್ದರು.
- - --28ಕೆಡಿವಿಜಿ5: ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಡಿಎಸ್‌ಎಸ್ ಮುಖಂಡರು ಮನವಿ ಅರ್ಪಿಸಿದರು.