ಜ.9ರಂದು ವಿಜಯನಗರ ಜಿಲ್ಲಾ ಬಂದ್‌ಗೆ ಕರೆ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಸಂಸತ್​ನಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು.

ಹೊಸಪೇಟೆ: ಭಾರತರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ ಜ.9ರಂದು ವಿಜಯನಗರ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿದೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಬಣ್ಣದಮನೆ ಸೋಮಶೇಖರ್‌, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಸಂಸತ್​ನಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ವಿಜಯನಗರ ಜಿಲ್ಲೆ ಬಂದ್​ಗೆ ಕರೆ ನೀಡಲಾಗಿದೆ. ಬಂದ್​ಗೆ ಬೆಂಬಲ ನೀಡುವಂತೆ ವರ್ತಕರು, ಚಲನಚಿತ್ರ ಮಾಲೀಕರು, ಆಟೋ ಚಾಲಕರು, ಬಸ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಸಂಘ-ಸಂಸ್ಥೆಗಳಲ್ಲಿ ಮನವಿ ಮಾಡಲಾಗಿದ್ದು, ಅವರು ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ ಎಂದರು.

ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಿಗೆ ಪ್ರವಾಸ ಕೈಗೊಂಡು ಸಂಘಸಂಸ್ಥೆಗಳ ಜೊತೆ ಚರ್ಚಿಸಿ ಜನವರಿ 9ರಂದು ಬಂದ್‌ ಯಶಸ್ವಿ ಮಾಡಲು ಕೋರಲಾಗುವುದು. ಈ ದೇಶದ ಆಸ್ತಿಯಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಈ ಹಿಂದೆ ಬಿಜೆಪಿಯ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರು. ಈಗ ಮತ್ತೆ ಗೃಹಮಂತ್ರಿ ಆಗಿರುವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಅಮಿತ್‌ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ತಾಲೂಕುಗಳಾದ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ ಕೂಡ್ಲಿಗಿ, ಕೊಟ್ಟೂರು ತಾಲ್ಲೂಕುಗಳಲ್ಲಿನ ದಲಿತ ಹಿಂದುಳಿದ ಅಲ್ಪಸಂಖ್ಯಾತರ, ರೈತ, ಮಹಿಳಾ, ಯುವ ವಿದ್ಯಾರ್ಥಿ, ಕೃಷಿ ಕೂಲಿ , ಕಟ್ಟಡ ಕಾರ್ಮಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ವಿಜಯನಗರ ಜಿಲ್ಲಾ ಬಂದ್ ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಕುರಿತು ಹೊಸಪೇಟೆಯಲ್ಲಿ ಪೂರ್ವಭಾವಿ ಸಭೆ ಕೂಡ ಮಾಡಲಾಗಿದೆ. ಜಿಲ್ಲೆಯಲ್ಲಿ ಬಂದ್‌ ಯಶಸ್ವಿ ಮಾಡುವ ಮೂಲಕ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಬಿಸಿ ಮುಟ್ಟಿಸಲಾಗುವುದು ಎಂದರು.

ಮುಖಂಡರಾದ ಡಿ.ವೆಂಕಟರಮಣ, ಬಿಸಾಟಿ ತಾಯಪ್ಪ ನಾಯಕ, ನಿಂಬಗಲ್ ರಾಮಕೃಷ್ಣ, ಎನ್‌. ಯಲ್ಲಾಲಿಂಗ, ದೊಡ್ಡ ಬಸಪ್ಪ, ರಾಮಚಂದ್ರ ಬಾಬು, ಕೆ.ರವಿಕುಮಾರ, ಎನ್. ವೆಂಕಟೇಶ, ರಮೇಶ್, ದೇವರಮನೆ ಕನ್ನೇಶ್ವರ, ಮೋಹಸಿನ್ ಕೋತ್ವಾಲ್, ಜೆ.ಶಿವಕುಮಾರ, ನೂರ್ ಅಹಮದ್, ಕುಬೇರ ದಲ್ಲಾಳಿ ಮತ್ತಿತರರಿದ್ದರು.

ಹೊಸಪೇಟೆಯ ಪತ್ರಿಕಾ ಭವನದಲ್ಲಿ ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ಜನವರಿ 9ರಂದು ವಿಜಯನಗರ ಜಿಲ್ಲಾ ಬಂದ್‌ ಕುರಿತ ಪೋಸ್ಟರ್‌ ಬಿಡುಗಡೆ ಮಾಡಿದರು.

Share this article