ಶಿರಸಿ-ಹಾವೇರಿ ರಸ್ತೆ ಹೊಂಡ ಮುಚ್ಚುವ ಕೆಲಸ ಆರಂಭ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಸುಮಾರು ೨೨ ಕಿ.ಮೀ. ವ್ಯಾಪ್ತಿಯಲ್ಲಿದ್ದ ಹೊಂಡಗಳನ್ನು ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿದೆ.

ಶಿರಸಿ: ಶಿರಸಿ-ಹಾವೇರಿ ರಸ್ತೆಯಲ್ಲಿದ್ದ ಹೊಂಡ-ಗುಂಡಿಗಳ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಗೊಂಡಿದ್ದು, ಸುಮಾರು ೨೨ ಕಿ.ಮೀ. ವ್ಯಾಪ್ತಿಯಲ್ಲಿದ್ದ ಹೊಂಡಗಳನ್ನು ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿದೆ.

ಶಿರಸಿ-ಹಾವೇರಿ ರಸ್ತೆಯು ಸಾಗರಮಾಲಾ ಯೋಜನೆಯಲ್ಲಿ ಹೆದ್ದಾರಿಯಾಗಿ ಮೇಲ್ದರ್ಜೇಗೇರಿ, ಅಗಲೀಕರಣ ಹಾಗೂ ಮರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ

ಆರಂಭಿಸಲು ಸೂಚನೆ ನೀಡಿತ್ತು. ಆದರೆ, ಅರಣ್ಯ ಇಲಾಖೆಯ ಒಪ್ಪಿಗೆ ಸಿಗದೇ ಕಳೆದ ೨ ವರ್ಷದಿಂದ ರಸ್ತೆ ಸಂಪೂರ್ಣ ಹೊಂಡ-ಗುಂಡಿಗಳಾಗಿ ವಾಹನ ಸವಾರರು ಸಂಚಾರ ಮಾಡಲು ಸಾಧ್ಯವಾಗದೇ ಆಡಳಿತ

ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುವಂತಾಗಿತ್ತು. ಅಲ್ಲದೇ, ರಸ್ತೆ ಸರಿಪಡಿಸುವಂತೆ ಸ್ಥಳೀಯರು ಪ್ರತಿಭಟನೆ, ಹೋರಾಟ, ರಸ್ತೆ ತಡೆ ಮಾಡಿ ಎಚ್ಚರಿಸಿದ್ದರು. ನಂತರ ಸಂಸದರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ-ಹಾವೇರಿ ಹೆದ್ದಾರಿ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ತೊಡಕು ನಿವಾರಿಸಿ, ಹಸಿರು ನಿಶಾನೆ ದೊರಕಿಸಿಕೊಟ್ಟಿದ್ದಾರೆ. ಆದರೆ ಸಧ್ಯ ಓಡಾಡಲು ಹೊಂಡ-ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ, ತಕ್ಷಣ ದುರಸ್ತಿ ಆರಂಭಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿರಸಿ-ಹಾವೇರಿ ರಸ್ತೆಯ ಸುಮಾರು ೨೨ ಕಿ.ಮೀ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

ಶಿರಸಿ-ಹಾವೇರಿಯ ರಸ್ತೆಯ ಸುಮಾರು ೩೦ ಕಿ.ಮೀ ದುರಸ್ತಿ ಮಾಡಲಾಗಿದೆ. ಚಿಪಗಿ ಕ್ರಾಸ್‌ನಿಂದ ಸುಮಾರು ೨೨ ಕಿ.ಮೀ ರಸ್ತೆ ರಿಪೇರಿ ಮಾಡಲಾಗುತ್ತಿದ್ದು, ೨ ಕೀಮಿ ಮಾತ್ರ ಬಾಕಿ ಇದೆ. ಡಿ. ೩೧ರ ಒಳಗಡೆ ಮುಗಿಸಲಾಗುತ್ತದೆ. ಅಗತ್ಯವಿರುವ ಎಲ್ಲ ಕಡೆಗಳಲ್ಲಿಯೂ ಗುಣಮಟ್ಟದ ದುರಸ್ತಿ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ತಿಳಿಸಿದರು.15 ಕಾಮಗಾರಿ

ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆಯಂತೆ ಶಿರಸಿ-ಹಾವೇರಿ ರಸ್ತೆ ದುರಸ್ತಿ

ಕಾಮಗಾರಿ ಆರಂಭಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿ ದೊರೆತಿದೆ. ೧೫ ದಿನದ ಒಳಗಡೆ

ಅಗಲೀಕರಣ ಹಾಗೂ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.

ಶಿವಕುಮಾರ, ಎನ್.ಎಚ್.ಎ.ಐ. ಪ್ರೊಜೆಕ್ಟ್ ಡೈರೆಕ್ಟರ್

Share this article