ಬಕ್ರೀದ್ ಹಬ್ಬದ ಪ್ರಯುಕ್ತ ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶಾಂತಿಸಭೆ ನಡೆಯಿತು. ಹಬ್ಬ ಶಾಂತಿಯುತವಾಗಿ ಆಚರಿಸುವಂತೆ ಸಹಾಯಕ ಆಯುಕ್ತ ಮಹೇಶ ಜೆ. ಕರೆ ನೀಡಿದರು.
ಭಟ್ಕಳ: ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ ಎಂದು ಸಹಾಯಕ ಆಯುಕ್ತ ಮಹೇಶ ಜೆ. ಕರೆ ನೀಡಿದರು.
ತಾಲೂಕು ಆಡಳಿತ ಸೌಧದಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕರೆಯಲಾದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಾಡಳಿತ ನೀಡುವ ಮಾರ್ಗಸೂಚಿ ಪ್ರಕಾರವಾಗಿ ಹಬ್ಬ ಆಚರಿಸುವಂತೆ ಅವರು ಕರೆ ನೀಡಿದರು. ಮೇ ೩೦ರ ತನಕ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆಯೂ ಅವರು ಸೂಚಿಸಿದರು. ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟ ಬಂದ್ ಮಾಡುವುದಲ್ಲದೇ, ತ್ಯಾಜ್ಯ ವಿಲೇವಾರಿಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಹಬ್ಬ ಆಚರಿಸಬೇಕು. ನಿಮ್ಮ ಸಹಕಾರ ಪೊಲೀಸ್ ಅಧಿಕಾರಿಗಳ ಜತೆಗೆ ಇರಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ನಮ್ಮ ಗಮನಕ್ಕೆ ತಂದಲ್ಲಿ ಸೂಕ್ತ ಪರಿಹಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದರು.
ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಈದ್ಗಾ ಮೈದಾನದಲ್ಲಿ ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡಿ ಬಕ್ರೀದ್ ಹಬ್ಬ ಆಚರಿಸಲಿದ್ದೇವೆ. ಮಳೆ ಬಂದಲ್ಲಿ ಮಸೀದಿಗಳಲ್ಲೇ ಪ್ರಾರ್ಥನೆ ಮಾಡುತ್ತೇವೆ. ತಾಲೂಕಿನಲ್ಲಿ ಪದೇ-ಪದೇ ಕರೆಂಟ್ ಹೋಗುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆ ಹೆಸ್ಕಾಂ ಗಮನ ಕೊಡಬೇಕು, ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದರು.
ಸಿಪಿಐ ದಿವಾಕರ್ ಎಂ., ಮಾತನಾಡಿ, ನಗರದ ಹಾಗೂ ಇತರ ಭಾಗಗಳಲ್ಲಿ ಯುವಕರು ಮಧ್ಯರಾತ್ರಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಕಠಿಣ ಕ್ರಮಕ್ಕೆ ಮುಂದಾಗಲಿದ್ದೇವೆ. ಯಾವುದೇ ತರಹದ ಸುಳ್ಳು, ಪ್ರಚೋದನಕಾರಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.