ವಿಶ್ವ ಛಾಯಾಗ್ರಾಹಕರ ದಿನ । ಹಿರಿಯ ಛಾಯಗ್ರಾಹಕರಿಗೆ ಸನ್ಮಾನ । ಪತ್ರಕರ್ತರ ಸಂಘ ಆಯೋಜನೆ
ಕನ್ನಡಪ್ರಭ ವಾರ್ತೆ ಹಾಸನ
ಸಮಾಜವನ್ನು ಪ್ರಜ್ಞಾವಂತಿಕೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕ್ಯಾಮೆರಾಗಳು ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ ತಿಳಿಸಿದರು.ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಥಮ ಬಾರಿಗೆ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಹಣಕ್ಕೆ ವಿಶ್ವದಲ್ಲೇ ವಿಶೇಷವಾದ ಮಾನ್ಯತೆ ಇದೆ. ಒಂದು ಕಾರ್ಯಕ್ರಮ ಅಥವಾ ಒಂದು ಘಟನೆಯ ಸಂಪೂರ್ಣ ವಿಚಾರವನ್ನು ಮನದಟ್ಟು ಮಾಡುವ ಶಕ್ತಿ ಒಂದು ಫೋಟೋಗೆ ಇದೆ. ಇತ್ತೀಚಿನ ದಿನಗಳಲ್ಲಿ ಸುದ್ದಿಗಳಿಗಿಂತ ಚಿತ್ರಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರ ಶ್ರಮ ಅಪಾರವಾಗಿದೆ ಎಂದು ಹೇಳಿದರು.
ಛಾಯಾಗ್ರಾಹಕರ ದಿನಾಚರಣೆಯನ್ನು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಛಾಯಾಗ್ರಾಹಕರ ಪ್ರೋತ್ಸಾಹಿಸುವ ಕೆಲಸಗಳು ಆಗಬೇಕಿದೆ ಎಂದ ಅವರು, ಛಾಯಾಗ್ರಾಹಕರ ದಿನಾಚರಣೆಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕುರಿತು ಹಲವು ಪತ್ರಕರ್ತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಕಳೆದ ಹಲವು ವರ್ಷಗಳಿಂದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್, ನಟರಾಜ್, ಪ್ರಕಾಶ್, ಜ್ಞಾನೇಶ್ವರ್, ಅಂಬಿಕಾ ಪ್ರಸಾದ್ ಹಾಗೂ ಪಿ.ಎ.ಶ್ರೀನಿವಾಸ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.