ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದ ಮೇರೆಗೆ ಅನಿವಾಸಿ ಭಾರತೀಯನೊಬ್ಬನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದ ಮೇರೆಗೆ ಅನಿವಾಸಿ ಭಾರತೀಯನೊಬ್ಬನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತನಾಗಿದ್ದು, ಆರೋಪಿಯಿಂದ ರೂಗರ್ ಕಂಪನಿಯ 7 ಜೀವಂತ ಗುಂಡುಗಳ ಮ್ಯಾಗ್ಜಿನ್‌ನನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ತನ್ನ ಸ್ನೇಹಿತನ ಜತೆ ಹೋಟೆಲ್‌ನಲ್ಲಿ ಪಾರ್ಟಿ ನಡೆಸಲು ಬಂದಿದ್ದ ಅರ್ಮಾನ್ ಮರೆತು ಮ್ಯಾಗ್ಜಿನ್‌ನ್ನು ಬಿಟ್ಟು ಹೋಗಿದ್ದ. ಆಗ ಈ ಬಗ್ಗೆ ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೊನೆಗೆ ತನಿಖೆ ನಡೆಸಿದಾಗ ಅರ್ಮಾನ್ ಜೈಲು ಸೇರುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪತ್ನಿಯ ಮೊದಲ ಪತಿಗೆ ಗನ್ ತೋರಿಸಿದ್ದ:
ಹಲವು ವರ್ಷಗಳಿಂದ ಅಮೆರಿಕದಲ್ಲಿ ಅರ್ಮಾನ್ ನೆಲೆಸಿದ್ದು, ಆ ದೇಶದ ಗ್ರೀನ್ ಕಾರ್ಡ್ ವೀಸಾವನ್ನು ಆತ ಹೊಂದಿದ್ದಾನೆ. ಅಮೆರಿಕದಲ್ಲಿ ಸೇನೆ ಹಾಗೂ ಸಾಫ್ಟ್‌ವೇರ್ ಕಂಪನಿಯಲ್ಲಿ ಅರ್ಮಾನ್ ಕೆಲಸ ಮಾಡಿದ್ದ. ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ಪತ್ನಿಯ ಮೊದಲ ಪತಿಗೆ ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅರ್ಮಾನ್ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಪತ್ನಿಯೇ ನೆರವಾಗಿದ್ದಳು. ಜೈಲಿನಿಂದ ಹೊರಬಂದ ಬಳಿಕ ತಾಯ್ನಾಡಿಗೆ ಅರ್ಮಾನ ಮರಳಿದ್ದ.
ಅಮೆರಿಕದಲ್ಲಿ ಪರವಾನಿಗೆ ಹೊಂದಿದ್ದ ಅರ್ಮಾನ್ ಬಳಿ ರೂಗರ್ ಕಂಪನಿಯ ಪಿಸ್ತೂಲ್ ಇದೆ. ಆದರೆ ಜೀವ ಬೆದರಿಕೆ ಪ್ರಕರಣದಲ್ಲಿ ಆತನ ರಿವಾಲ್ವಾರ್‌ನನ್ನು ಅಲ್ಲಿನ ಪೊಲೀಸರು ಜಪ್ತಿ ಮಾಡಿದ್ದರು. ಆದರೆ ಬೆಂಗಳೂರಿಗೆ ಬರುವಾಗ ಮ್ಯಾಗ್ಜಿನ್ ಅನ್ನು ಆತ ತಂದಿದ್ದ. ಏ.27ರಂದು ಹೋಟೆಲ್‌ಗೆ ಗೆಳೆಯನ ಜತೆ ಪಾರ್ಟಿ ಮಾಡಲು ಅರ್ಮಾನ್ ಬಂದಿದ್ದ. ಆಗ ಆತ ಮರೆತು ಮ್ಯಾಗ್ಜಿನ್‌ನ್ನು ಬಿಟ್ಟು ಹೋಗಿದ್ದ. ಮರು ದಿನ ಹೋಟೆಲ್‌ಗೆ ಕರೆ ಮಾಡಿ ತನ್ನ ಮ್ಯಾಗ್ಜಿನ್ ಅನ್ನು ಕಳುಹಿಸುವಂತೆ ಅರ್ಮಾನ್ ಕೋರಿದ್ದ. ಆದರೆ, ಹೋಟೆಲ್ ಸಿಬ್ಬಂದಿ, ತಾವೇ ಬಂದು ಮ್ಯಾಗ್ಜಿನ್ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. 2 ವಾರ ಕಳೆದರೂ ಆತ ಬಾರದೆ ಹೋದಾಗ ಕೊನೆಗೆ ಜೆ.ಸಿ.ನಗರ ಪೊಲೀಸರಿಗೆ ಹೋಟಲ್ ಮ್ಯಾನೇಜರ್ ಪ್ರಕಾಶ್ ಮಾಹಿತಿ ನೀಡಿದರು. ಕೂಡಲೇ ತನಿಖೆಗಿಳಿದ ಪೊಲೀಸರು, ಅರ್ಮಾನ್ ಬಗ್ಗೆ ವಿವರ ಕಲೆ ಹಾಕಿ ವಶಕ್ಕೆ ಪಡೆದಿದ್ದಾರೆ. ಬಳಿಕ ಅಮೆರಿಕ ಪೊಲೀಸರನ್ನು ಸಂಪರ್ಕಿಸಿ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಪತ್ತೆಯಾದ ಮ್ಯಾಗ್ಜಿನ್‌ಗೆ ಪರವಾನಿಗೆ ಇರುವುದು ಗೊತ್ತಾಗಿದೆ. ಆದರೆ ಭಾರತಕ್ಕೆ ಅಕ್ರಮವಾಗಿ ತಂದ ಆರೋಪದ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ-ರಾಜ್ಯ ತನಿಖಾ ಏಜೆನ್ಸಿಗಳ ಗ್ರೀಲ್
ಅಕ್ರಮ ಜೀವಂತ ಗುಂಡು ಪತ್ತೆ ಪ್ರಕರಣ ಸಂಬಂಧ ಅರ್ಮಾನ್‌ನನ್ನು ಕೇಂದ್ರ ಹಾಗೂ ರಾಜ್ಯ ತನಿಖಾ ಏಜೆನ್ಸಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದಿವೆ. ಗುಪ್ತದಳ, ರಾಷ್ಟ್ರೀಯ ತನಿಖಾ ದಳ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.