ಚಿತ್ರದುರ್ಗ: ಕೋವಿಡ್ ಜೆಎನ್-1 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ 60 ವರ್ಷ ಮೇಲ್ಪಟ್ಟವರಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ಜೆಎನ್-1 ಸೋಂಕು ಆತಂಕ ಬೇಡ, ಮುಂಜಾಗ್ರತೆ ಇರಲಿ. ಅರ್ಹರು ಮುಂಜಾಗ್ರತಾ ಲಸಿಕೆ ಪಡೆಯಿರಿ. ಜ್ವರ, ಸುಸ್ತು ಸೇರಿದಂತೆ ಇನ್ನಿತರೆ ಚಹರೆಗಳು ಬಂದಲ್ಲಿ ವಿಳಂಬ ಮಾಡದೆ ಆಸ್ಪತ್ರೆಗೆ ಧಾವಿಸಿ ಬರುವಂತೆ ವಿನಂತಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ-23ರಲ್ಲಿ ಕಾರ್ಬಿವ್ಯಾಕ್ಸ್ ಲಸಿಕಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ತಾಲೂಕು ಅರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಆರೋಗ್ಯ ಇಲಾಖೆಯ ಸೇವಾ ನೌಕರರಿಗೆ, ಸಹವರ್ತಿ ಕಾಯಿಲೆಗಳನ್ನು ಹೊಂದಿರುವವರಿಗೆ ಈಗಾಗಲೇ ಬೂಸ್ಟರ್ ಡೋಸ್ ಪಡೆದು 26 ವಾರಗಳನ್ನು ಸಂಪೂರ್ಣಗೊಳಿಸಿದವರಿಗೆ ಮುನ್ನೆಚ್ಚರಿಕಾ ಡೋಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯ ವಾರ್ಡ್ ಸಂಖ್ಯೆ 23ರಲ್ಲಿ ಲಸಿಕಾ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲಾತಿಗಳನ್ನು ತಂದು ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಯಾವುದೇ ಲಸಿಕೆ ಪಡೆದಿದ್ದರೂ ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿದೆ. ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣಾ ನಡಾವಳಿಕೆಗಳ ಅಭ್ಯಾಸ ಮಾಡಿ ಕೋವಿಡ್ ಜೆಎನ್-1ನೇ ಅಲೆಯನ್ನು ತಡೆಗಟ್ಟೋಣ. ತಪ್ಪದೇ ಮಾಸ್ಕ್ ಧರಿಸುವುದು, ಸ್ಯಾನಿಟೇಜರ್ ಬಳಸಿ ಕೈಗಳ ಶುಚಿತ್ವ ಕಾಪಾಡಿಕೊಳ್ಳುವುದು, ಜಾತ್ರೆ, ಹಬ್ಬ, ಜನಸಂದಣಿ ಸ್ಥಳಗಳಿಂದ ದೂರವಿರುವುದು, ಶೀತ, ಕೆಮ್ಮು, ಜ್ವರ, ನೆಗಡಿ ಬಂದಾಗ ತಪ್ಪದೇ ಕೋವಿಡ್ ಪರೀಕ್ಷೆ ತಪಾಸಣೆ ಮಾಡಿಸಿಕೊಳ್ಭಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ, ಸೀನುವಾಗ ಮುಂಜಾಗ್ರತೆವಹಿಸುವುದು ಪ್ರಮುಖವಾಗಿದೆ ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ತಾಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಾರ್ವಜನಿಕರು ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆದರು. ಜಿಲ್ಲಾ ಲಸಿಕಾ ವ್ಯವಸ್ಥಾಪಕ ವೀರೇಶ್, ಚಿತ್ರದುರ್ಗ ತಾಲೂಕು ವ್ಯವಸ್ಥಾಪಕ ಮೊಹಮ್ಮದ್ ಅಲಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಭಾಗ್ಯಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಇದ್ದರು.