- ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಈ ಬಾರಿ ಕುಡಿಯುವ ನೀರಿಗೆ ತೊಂದರೆಯಾಗುವ ಸಂಭವ ಇರುವುದರಿಂದ ಕುಡಿಯುವ ನೀರಿನ ಕಾಮಗಾರಿಗಳನ್ನು ವಿಳಂಬ ಮಾಡದೆ ಹೆಚ್ಚಿನ ಆದ್ಯತೆ ನೀಡಿ ಪೂರ್ಣಗೊಳಿಸಿ ಎಂದು ತಾಪಂ ಆಡಳಿತಾಧಿಕಾರಿ ಎಲ್.ನಂದೀಶ್ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಗೆ ಸೂಚಿಸಿದರು.
ಬುಧವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈಗಾಗಲೇ ಸರ್ಕಾರ ನರಸಿಂಹರಾಜಪುರ ತಾಲೂಕನ್ನು ಸಾಧಾರಣ ಬರ ಪೀಡಿತ ತಾಲೂಕೆಂದು ಘೋಷಿಸಿದೆ. ಅಲ್ಲದೆ ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆ ಆಗಿದೆ. ಮುಂದೆ ಕುಡಿಯುವ ನೀರಿನ ಅಭಾವ ತಲೆದೋರಬಹುದಾಗಿದೆ. ಆದ್ದರಿಂದ ಮೆಸ್ಕಾಂ, ಪಂಚಾಯತ್ ರಾಜ್ ಹಾಗೂ ಕುಡಿಯುವ ನೀರಿನ ವಿಭಾಗದ ಇಂಜಿನಿಯರ್‌ಗಳು ಒಟ್ಟಾಗಿ ಎಲ್ಲಾ ಯೋಜನೆಯಡಿ ಬಾಕಿ ಇರುವ ಕುಡಿಯುವ ನೀರಿನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ತಾಲೂಕಿನಲ್ಲಿ ಒಂದು ಕೋವಿಡ್ ಪ್ರಕರಣ ಸ್ಟೇಟ್ ಬುಲೆಟಿನ್‌ನಲ್ಲಿ ವರದಿಯಾಗಿದೆ. ರೋಗಿ 82 ವರ್ಷದವರಾಗಿದ್ದು, ಕಿಡ್ನಿ ಹಾಗೂ ಉಸಿ ರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೋಂ ಐಸೋಲೇಶನ್ ಇಡಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದೀಗ ಸಂಪೂರ್ಣವಾಗಿ ಗುಣ ಮುಖರಾಗಿದ್ದಾರೆ ಎಂದರು.
ಮೆಸ್ಕಾಂ ಎಇಇ ಗೌತಮ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗಿದೆ. ಜೆಜೆಎಂ ಯೋಜನೆಯವರು ಹಣ ಪಾವತಿಸದೇ ಇರುವುದರಿಂದ ಕುಡಿಯುವ ನೀರಿನ ಕಾಮಗಾರಿಗೆ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ ಎಂದರು. ಆಡಳಿತಾಧಿಕಾರಿ ಎಲ್.ನಂದೀಶ್ ಮಾತನಾಡಿ, ಹಣ ಪಾವತಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು, ಕುಡಿಯುವ ನೀರಿನ ಕಾಮಗಾರಿಯೇ ವಿಳಂಬವಾದರೆ ಹೇಗೆ ? ಕೂಡಲೇ ಹಣ ಪಾವತಿಸಿ ಕ್ರಮ ಕೈಗೊಳ್ಳಿ ಎಂದು ಇಂಜಿನಿಯರ್ ರಕ್ಷತ್ ಸಾಗರ್ ಅವರಿಗೆ ಸೂಚಿಸಿದರು.ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಕೃಷಿ ಇಲಾಖೆ ಕಚೇರಿಯಲ್ಲಿ 21 ಮಂಜೂರಾತಿ ಹುದ್ದೆಗಳಿದ್ದು ಅದರಲ್ಲಿ ಕೇವಲ 3 ಜನ ಮಾತ್ರ ಅಧಿಕಾರಿಗಳಿದ್ದಾರೆ. ಬೆಳೆ ಸಮೀಕ್ಷೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.
ವೇದಿಕೆಯಲ್ಲಿ ತಾಪಂ ಇ ಒ ಎಚ್.ಡಿ.ನವೀನ್‌ಕುಮಾರ್ ಉಪಸ್ಥಿತರಿದ್ದರು. ಸಾಮಾನ್ಯ ಸಭೆಯಲ್ಲಿ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಭಾಗವಹಿಸಿದ್ದು ತಮ್ಮ, ತಮ್ಮ ಇಲಾಖೆ ಪ್ರಗತಿಯನ್ನು ಸಭೆಗೆ ತಿಳಿಸಿದರು.