ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಬಿ.ಎಚ್.ರಸ್ತೆಯ ಶಿವಮೂರ್ತಿ ಮುರುಘಾರಾಜೇಂದ್ರ ಸಭಾಂಗಣದಲ್ಲಿ ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ, ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅಸ್ವಾದಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.
ಸ್ವರ ಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಲ ಪ್ರಯೋಜಕರ ಸಹಕಾರದಿಂದ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿನಲ್ಲಿ ಎಲೆಮರೆಯ ಕಾಯಿಯಂತೆ ಸಂಗೀತ, ಜನಪದ, ವಾದ್ಯಸಂಗೀತದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿಯೂ ಹಾಡುವ ಮೂಲಕ ನಾಡಿನೆಲ್ಲೆಡೆ ಹೆಸರು ಮಾಡಿದ್ದಾರೆ. ಅವರಂತೆ ನೀವುಗಳ ಸಹ ಸಂಗೀತಾಸಕ್ತಿ ಬೆಳೆಸಿಕೊಂಡರೆ, ಎತ್ತರಕ್ಕೆ ಬೆಳೆಯಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಹಿರಿಯ ಕಲಾವಿದರ ಜೊತೆಗೆ, ಕಿರಿಯರು ಹಾಡುವ ಮೂಲಕ ಮುಂದಿನ ಪೀಳಿಗೆಗೆ ಜನಪದ ಸಂಗೀತವನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡುತಿದ್ದಾರೆ. ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಸ್ಥೆ ಸರಕಾರಿ ಶಾಲಾ ಮಕ್ಕಳಿಗೆ ಜನಪದ ನೃತ್ಯ ಪ್ರಕಾರ ತರಬೇತಿ ಶಿಬಿರ ನಡೆಸಿ, ಮಕ್ಕಳಲ್ಲಿ ಜಾನಪದ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಕ್ಕಳು ಸಹ ತಮ್ಮ ಓದಿನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವರಸಿಂಚನ ಸುಗಮ ಸಂಗಿತ, ಜನಪದ ಕಲಾ ಸಂಸ್ಥೆಯ ಮಲ್ಲಿಕಾರ್ಜುನ ಕೆಂಕೆರೆ, ಕಳೆದ ೨೫ ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಾಯನ ಕ್ಷೇತ್ರಕ್ಕೆ ಡಾ. ಲಕ್ಷ್ಮಣದಾಸ್ ರಂತಹ ಹಿರಿಯರ ಮಾರ್ಗದರ್ಶನದಲ್ಲಿ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲದೆ, ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ನಮ್ಮ ಸಂಗೀತ ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ. ಅವರೆಲ್ಲರನ್ನು ಕೃತಜ್ಞತೆಯಿಂದ ನೆನೆಯುವುದಾಗಿ ತಿಳಿಸಿದರು.
ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ ಕಾರ್ಯಕ್ರಮದಲ್ಲಿ ಶ್ರೀಸಾಯಿರಾಮ ನೃತ್ಯ ಕೇಂದ್ರದ ರತಿಕಾ ಸಾಗರ್ ಅವರಿಂದ ಸುಗ್ಗಿ ಸಂಭ್ರಮ ನೃತ್ಯ, ದಿಶಾ ಜೈನ್, ಅಶ್ವಿನಿ ಮತ್ತು ಬಳಗದಿಂದ ಸುಗಮ ಸಂಗೀತ ಗಾಯನ, ಮಧುಗಿರಿ ತಾಲೂಕು ಮಲ್ಲನಾಯಕನಹಳ್ಳಿಯ ದ್ಯಾವರಪ್ಪ ಮತ್ತು ಬಳಗದಿಂದ ತತ್ವಪದಗಳು, ಗಾಯಕಿ ಮೀರಾ ಕೇಶವರಾಜ್ ಅವರಿಂದ ಜಾನಪದ ಗಾಯನ, ಕಲಾಶ್ರೀ ಡಾ. ಲಕ್ಷ್ಮಣದಾಸ್ ಅವರಿಂದ ರಂಗಗೀತೆ, ವೀರೇಂದ್ರ ತಂಬಾಡಿ ಅವರಿಂದ ಮ್ಯಾಂಡೋಲಿನ್ ವಾದನ, ಕೇಶವರಾಜ್ ಅವರಿಂದ ಕೊಳಲು ವಾದನ ನಡೆಯಿತು.