ಕೊಪ್ಪಳ: ತೀವ್ರತರ ವಿಕಲಚೇತನರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಮನೋಸ್ಥೈರ್ಯ ಅಗತ್ಯವಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ತಿಳಿಸಿದರು.
ಸರ್ಕಾರ ಆರೈಕೆದಾರರ ಸಂಕಷ್ಟ ಮನಗಂಡು ಅವರನ್ನು ಗುರುತಿಸಿ ಅವರಿಗೆ ಮಾಸಿಕ ₹1000 ಮಾಸಾಶನ ಕೊಡುವ ಯೋಜನೆ ಜಾರಿಗೆ ತಂದಿದ್ದು, ಆಯ್ದ ಅಂಗವಿಕಲತೆಯುಳ್ಳ ವಿಕಲಚೇತನರ ಆರೈಕೆದಾರರಿಗೆ ನೀಡಲಾಗುತ್ತಿದೆ. ಅದರಂತೆ ನಗರಸಭೆಯ ಅನುದಾನದಡಿ ಆರೈಕೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯ ತ್ವರಿತವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಾದ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಸಂಘ-ಸಂಸ್ಥೆಗಳ ಮೂಲಕ ವಿಕಲಚೇತನರ ಆರೈಕೆದಾರರ ಸಬಲೀಕರಣಕ್ಕಾಗಿ ಪ್ರಾರಂಭವಾದ ಕಾರ್ಯ ಮತ್ತು ವಕಾಲತ್ತು ಚಟುವಟಿಕೆಗಳ ಫಲವಾಗಿ ಇಂದು ಕರ್ನಾಟಕ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಆರೈಕೆದಾರರ ಅಭಿವೃದ್ಧಿಗೆ ನೀತಿ ನಿಯಮ ರೂಪಿಸಿ ಮಾಸಾಶನ ಯೋಜನೆ ಜಾರಿಗೆ ತಂದಿರುವುದು ಸಾವಿರಾರು ಆರೈಕೆದಾರರಿಗೆ ನೆರವಾಗಲಿದೆ ಎಂದು ತಿಳಿಸಿದರು.ರಾಜೇಂದ್ರ ಜೈನ್ ಮಾತನಾಡಿ, ಅರುಣಚೇತನ ವಿಶೇಷ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳ ಪುನಃಶ್ಚೇತನಕ್ಕೆ ದಾನಿಗಳು ನೆರವಾಗಬೇಕೆಂದು ಮನವಿ ಮಾಡಿದರು.
ರಾಜು ಶೆಟ್ಟರ ಮತ್ತು ಸುಮಂಗಲಾ ಶೆಟ್ಟರ್ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವ ನಿಮಿತ್ತ ಶಾಲೆಯ ಮೂವರು ವಿಕಲಚೇತನ ಮಕ್ಕಳಿಗೆ ಸಾಧನ-ಸಲಕರಣೆ ವಿತರಿಸಿದರು.ಆರೈಕೆದಾರರ ಸಬಲೀಕರಣಕ್ಕೆ ತಮ್ಮ ಇಳಿ ವಯಸ್ಸಿನಲ್ಲೂ ಕೊಡುಗೆ ನೀಡಿದ ಡಾ. ರಾಧಾ ಕುಲಕರ್ಣಿಯವರಿಗೆ ಸಂಘ-ಸಂಸ್ಥೆಗಳ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧು ಶೆಟ್ಟರ್, ಕಾರ್ಯದರ್ಶಿ ರೇಖಾ ಕಡ್ಲಿ, ನೀಲಕಂಠಯ್ಯ ಹಿರೇಮಠ, ಈರಪ್ಪ ಕರೇಕುರಿ, ಶಾಲಾ ಫಿಜಿಯೋಥೆರಪಿಸ್ಟ್ ವಿರುಪಾಕ್ಷಪ್ಪ ಅಳವಂಡಿ, ವರ್ಷಾ ಹಿರೇಮಠ, ಸಿದ್ಧನಗೌಡ ಮಾಲಿಪಾಟೀಲ್, ನಾಗರಾಜ ಅರಸಿನಕೇರಿ, ಶಾಲಾ ಸಿಬ್ಬಂದಿ ವರ್ಗ, ವಿಕಲಚೇತನ ಮಕ್ಕಳು ಮತ್ತು ಆರೈಕೆದಾರರು ಉಪಸ್ಥಿತರಿದ್ದರು. ವಿರುಪಾಕ್ಷಪ್ಪ ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು.