ಶಿವಾನಂದ ಗೊಂಬಿ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ 3 ನಿಗಮಗಳಲ್ಲಿದ್ದ ಕಾರ್ಗೋ ಸರ್ವೀಸ್ ಸ್ಥಗಿತಗೊಂಡಿದೆ. ಆದರೆ, ಎಲ್ಲೆಡೆ ಖಾಸಗಿ ವ್ಯಕ್ತಿಗಲಿಂದ ಅನಧಿಕೃತ ಕಾರ್ಗೋ ಸರ್ವೀಸ್ ಶುರುವಾಗಿದ್ದು, ಸಾರ್ವಜನಿಕರ ಸುಲಿಗೆ ನಡೆಯುತ್ತಿದೆ. ಯಾರೀ ವ್ಯಕ್ತಿಗಳು ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲವಂತೆ. ಆದರೆ, ಬಸ್ ನಿಲ್ದಾಣಗಳಲ್ಲಿನ ಸಿಬ್ಬಂದಿಗೆ ಮಾತ್ರ ಇದು ಗೊತ್ತು!ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣದಲ್ಲಿನ ಖಾಸಗಿ ಕಾರ್ಗೋ ಸರ್ವೀಸ್‌ನ ಕರಾಮತ್ತು. ಸಾರ್ವಜನಿಕರು ತುರ್ತು ಪಾರ್ಸಲ್‌ಗಳಿದ್ದರೆ ಕಳುಹಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ಸ್ಟ್ರ್ಯಾಟಜಿಕ್ ಎಂಬ ಸಂಸ್ಥೆಗೆ ಹೊರಗುತ್ತಿಗೆ ನೀಡಿ ಕಾರ್ಗೋ ಸರ್ವೀಸ್ ಶುರು ಮಾಡಿತ್ತು. 3 ವರ್ಷ ಇದು ನಡೆಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೀಗೆ 3 ನಿಗಮಗಳ ಬಸ್ ನಿಲ್ದಾಣಗಳಲ್ಲೂ ಕಾರ್ಗೋ ಸರ್ವೀಸ್ ಇತ್ತು.
ಆದರೆ ಶುಲ್ಕ, ವರ್ತನೆ, ಹಮಾಲಿಗೂ ದುಡ್ಡು ವಸೂಲಿ ಸೇರಿದಂತೆ ಹಲವು ಬಗೆಯ ದೂರು ಬಂದವಂತೆ. ಹೀಗಾಗಿ, 10-15 ದಿನದ ಹಿಂದೆ ಗುತ್ತಿಗೆ ಪಡೆದ ಏಜೆನ್ಸಿಗೆ 3 ನಿಗಮ ಸೇರಿ ₹1 ಕೋಟಿ ದಂಡ ವಿಧಿಸಿ ರದ್ದುಪಡಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿನ ಕಾರ್ಗೋ ಸರ್ವೀಸ್ ಈಗ ಸ್ಥಗಿತವಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯ 170 ಬಸ್ ನಿಲ್ದಾಣಗಳಲ್ಲಿ 25 ನಿಲ್ದಾಣಗಳಲ್ಲಿ ಕಾರ್ಗೋ ಸರ್ವೀಸ್ ಇತ್ತು.ಅನಧಿಕೃತ ವ್ಯಕ್ತಿಗಳು; ಸಿಬ್ಬಂದಿಯ ಸಾಥ್
ಅತ್ತ ಕಾರ್ಗೋ ಸರ್ವೀಸ್ ಬಂದ್ ಅಗುತ್ತಿದ್ದಂತೆ ಇತ್ತ ಎಲ್ಲ ಬಸ್ ನಿಲ್ದಾಣಗಳಲ್ಲಿ ಖಾಸಗಿ ವ್ಯಕ್ತಿಗಳೇ ತಮ್ಮದೇ ಕಾರ್ಗೋ ಸರ್ವೀಸ್ ಪ್ರಾರಂಭಿಸಿದ್ದಾರೆ. ಕಾರ್ಗೋ ಆಫೀಸ್ ಇದ್ದ ಜಾಗೆಯ ಪಕ್ಕದಲ್ಲೇ ಬೆಂಚ್ ಹಾಕಿಕೊಂಡು ಕುಳಿತಿರುತ್ತಾರೆ. ಯಾರಾದರೂ ಬಸ್ ನಿಲ್ದಾಣಕ್ಕೆ ಪಾರ್ಸಲ್ ತೆಗೆದುಕೊಂಡು "ಕಾರ್ಗೋ ಸರ್ವೀಸ್ ಎಲ್ಲಿ " ಅಂತ ಕೇಳಿದರೆ ಸಾಕು ಈ ಇಬ್ಬರಲ್ಲಿ ಒಬ್ಬರು ಬಂದು ಕಾರ್ಗೋ ಸರ್ವೀಸ್ ಬಂದಾಗಿದೆ. ಆದರೆ ನಾವು ಕಳುಹಿಸಿಕೊಡುತ್ತೇವೆ ಎಂದು ತಿಳಿಸುತ್ತಾರೆ. ಯಾವ ಊರಿಗೆ ಹೋಗಬೇಕು ಆ ಊರಿಗೆ ಇಷ್ಟು ಚಾರ್ಜ್ ಆಗುತ್ತದೆ ಎಂದು ವಸೂಲಿ ಮಾಡುತ್ತಾರೆ.ಕನಿಷ್ಠ ಇಲ್ಲಿ ₹250ಯಿಂದ ಶುರುವಾಗಿ ₹500- ₹1000 ಕೂಡ ದಾಟುತ್ತದೆ. ಇದಕ್ಕೆ ಸಂಸ್ಥೆಯ ಸಿಬ್ಬಂದಿಯೂ ಸಾಥ್ ಇದೆ ಎಂಬುದು ಬಹಿರಂಗ ಸತ್ಯ. ಖಾಸಗಿ ವ್ಯಕ್ತಿಗಳ ಸರ್ವೀಸ್‌ನಲ್ಲಿ ರಸೀದಿ ಕೊಡಲ್ಲ. ತೂಕ ನೋಡಲ್ಲ. ಆದರೆ, ಯಾವ ಊರಿಗೆ ಪಾರ್ಸಲ್ ಕಳುಹಿಸಬೇಕಾಗುತ್ತದೆಯೋ ಆ ಬಸ್ ಬಂದ ತಕ್ಷಣ ಕಂಡಕ್ಟರ್ ಹೇಳಿ ಪಾರ್ಸಲ್ ಇಡುತ್ತಾರೆ. ಆ ಕಂಡಕ್ಟರ್, ಡ್ರೈವರ್‌ಗೂ ಸ್ವಲ್ಪ ಕೊಡುತ್ತಾರಂತೆ. ಜತೆಗೆ ಪಾರ್ಸಲ್ ಇಡಲು ಬಂದಂತಹ ಸಾರ್ವಜನಿಕರಿಗೆ ಆ ಬಸ್ ನಂಬರ್, ಕಂಡಕ್ಟರ್ ನಂಬರ್ ಕೊಟ್ಟು ಆ ಊರಿಗೆ ಈ ಬಸ್ ಇಷ್ಟೊತ್ತಿಗೆ ಹೋಗುತ್ತದೆ. ಅಲ್ಲಿ ನಿಮ್ಮವರಿಗೆ ತಿಳಿಸಿ ಇಳಿಸಿಕೊಳ್ಳಿ ಎಂದು ಮಾಹಿತಿಯನ್ನೂ ಫೋನ್ ಮೂಲಕ ನೀಡುತ್ತಾರೆ.
ಅಧಿಕಾರಿಗಳಿಗೆ ಗೊತ್ತಿಲ್ಲವಂತೆಬಸ್ ನಿಲ್ದಾಣದಲ್ಲೇ ಟ್ರಾಫಿಕ್ ಕಂಟ್ರೋಲರ್ ಸೇರಿದಂತೆ ಸಾಕಷ್ಟು ಜನ ಅಧಿಕಾರಿಗಳುಂಟು. ಆದರೆ ಇವರ್‍ಯಾರಿಗೂ ಇಲ್ಲಿ ನಡೆಯುವ ಖಾಸಗಿ ವ್ಯಕ್ತಿಗಳ ಕಾರ್ಗೋ ಸರ್ವೀಸ್ ಬಗ್ಗೆ ಗೊತ್ತೇ ಇಲ್ಲವಂತೆ. ಆ ರೀತಿ ಯಾರು ಮಾಡುವುದಕ್ಕೆ ಬರಲ್ಲ. ಅದಕ್ಕೆ ಅವಕಾಶವೂ ಇಲ್ಲ. ಹಾಗೇನಾದರೂ ತುರ್ತು ಪಾರ್ಸಲ್ ಕಳುಹಿಸುವುದಿದ್ದರೆ, ಕಂಡಕ್ಟರ್‌ಗೆ ಹೇಳಿ ಪಾರ್ಸಲ್ ಮಾಡಿಸಿ ಕಳುಹಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಕಂಡರೂ ಕಾಣದಂತೆ ಅಧಿಕಾರಿಗಳು ಇದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಏನು ಮಾಡಬೇಕುಒಳ್ಳೆಯ ಸಂಸ್ಥೆಗೆ ಗುತ್ತಿಗೆ ಕೊಟ್ಟ ಕಾರ್ಗೋ ಸರ್ವೀಸ್‌ನ್ನು ಪುನಾರಂಭಿಸಬೇಕು. ಅಲ್ಲಿವರೆಗೂ ಸಂಸ್ಥೆಯೇ ಒಂದಿಬ್ಬರು ಸಿಬ್ಬಂದಿಯನ್ನು ನಿಯೋಜಿಸಿ ಪಾರ್ಸಲ್‌ಗಳಿದ್ದರೆ ರಸೀದಿ ಮಾಡಿ ಕಳುಹಿಸುವ ವ್ಯವಸ್ಥೆ ಮಾಡಿದರೆ ಖಾಸಗಿ ವ್ಯಕ್ತಿಗಳ ಜೇಬು ಸೇರುತ್ತಿರುವ ದುಡ್ಡು ನಿಲ್ಲಿಸಿದಂತಾಗುತ್ತದೆ. ಸಾರ್ವಜನಿಕರ ಸುಲಿಗೆ ಬಂದ್ ಆಗುವುದರ ಜತೆಗೆ ಸಂಸ್ಥೆಯ ಆದಾಯವೂ ಹೆಚ್ಚಾಗುತ್ತದೆ. ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಸುಲಿಗೆಗೆ ಅವಕಾಶವಿಲ್ಲಕಾರ್ಗೋ ಸರ್ವೀಸ್ ನಡೆಸುತ್ತಿದ್ದ ಏಜೆನ್ಸಿ ಮೇಲೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು. ಹೀಗಾಗಿ, ಅದನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸುಲಿಗೆ ಮಾಡಲು ಅವಕಾಶವಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
-ವಿವೇಕ ವಿಶ್ವಜ್ಞ, ಮುಖ್ಯ ಸಂಚಾರ ವ್ಯವಸ್ಥಾಪಕರು, ವಾಯವ್ಯ ಸಾರಿಗೆ