ಜನಗಣತಿ ಕಾರ್ಯದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ
ಜನಗಣತಿ ಕಾರ್ಯವು ರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಗಣತಿ ಕಾರ್ಯದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಈ ಬಾರಿಯ ಜನಗಣತಿಯು ಸ್ವಾತಂತ್ರ್ಯಾನಂತರ ನಡೆಯುತ್ತಿರುವ 8ನೇ ಜನಗಣತಿಯಾಗಿದ್ದು, ಡಿಜಿಟಲ್ ಮೋಡ್‌ನಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಸ್ಮಾರ್ಟ್ ಪೋನ್‌ಗಳ ಮೂಲಕ ನಡೆಯುವ ಈ ಜನಗಣತಿಗೆ ಪ್ರತ್ಯೇಕ ಆ್ಯಪ್ ರಚಿಸಲಾಗಿದ್ದು, ಆ್ಯಪ್‌ನಲ್ಲಿಯೇ ಪ್ರತೀ ಮನೆಯ ಸುಮಾರು 30 ಪ್ರಶ್ನೆಗಳಿಗೆ ಉತ್ತರಗಳನ್ನು ದಾಖಲಿಸಬೇಕಾಗುತ್ತದೆ. ಜನಗಣತಿಯು 2 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಏ. 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏ. 16ರಿಂದ ಮೇ 16ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, ದೇಶದ ಜನಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ದೊರೆತ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಅಧೀನದ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಸ್ವಾಗತಿಸಿದರು. ಜಿಲ್ಲೆಯ ನೋಡೆಲ್ ಅಧಿಕಾರಿ ರಾಮ್ ಕುಮಾರ್ ಇದ್ದರು.