ಜೈಪುರ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಗೀರಥ್ ಚೌಧರಿ ರಾಜಸ್ಥಾನದಲ್ಲಿರುವ ತಮ್ಮ ಜಮೀನಿನ ಸೌತೆಕಾಯಿ ಬೆಳೆಗಾಗಿ ತಮ್ಮದೇ ಸಚಿವಾಲಯದಿಂದ 99.60 ಲಕ್ಷ ರು. ಸಹಾಯಧನ ಪಡೆದ ವಿಷಯ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಈ ಸಬ್ಸಿಡಿಗೆ ಅನುಮೋದನೆ ನೀಡಿರುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (ಎನ್‌ಎಚ್‌ಬಿ) ಉಪಾಧ್ಯಕ್ಷರೂ ಕೂಡಾ ಚೌಧರಿ ಅವರೇ ಆಗಿದ್ದಾರೆ.

ರಾಜಸ್ಥಾನದ ದೀದ್ವಾನಾ-ಕುಚಾಮನ್ ಜಿಲ್ಲೆಯ ಪೀಹ್ ಗ್ರಾಮದಲ್ಲಿ ಚೌಧರಿ 4 ದೊಡ್ಡ ಪಾಲಿಹೌಸ್‌ಗಳಿರುವ 16,592 ಚದರ ಮೀ. ವಿಸ್ತೀರ್ಣದ ಜಮೀನು ಹೊಂದಿದ್ದಾರೆ. ಇಲ್ಲಿ ನಾಮಫಲಕವೊಂದನ್ನು ಅಳವಡಿಸಲಾಗಿದೆ. ಅದರಲ್ಲಿ ‘ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ಸಹಾಯಧನ ಪಡೆದಿದೆ’ ಎಂದು ಬರೆಯಲಾಗಿದೆ. ಫಲಾನುಭವಿಯ ಹೆಸರು ‘ಭಗೀರಥ್ ಚೌಧರಿ’ ಎಂದಿದ್ದು, ಶೇ.50ರಷ್ಟು ಅಂದರೆ 99,60,000 ರು. ಸಬ್ಸಿಡಿ ಮೊತ್ತವನ್ನು ಉಲ್ಲೇಖಿಸಲಾಗಿದೆ. ಅನುಮೋದನೆ ಪಡೆದ ಕೇವಲ 467 ಮಂದಿ ಫಲಾನುಭವಿಗಳಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಸಚಿವರದ್ದು ಸ್ವಹಿತಾಸಕ್ತಿ ಸಂಘರ್ಷ ಎಂದು ವಿಪಕ್ಷಗಳು ಕಿಡಿಕಾರಿವೆ.


ತಪ್ಪಿಲ್ಲ:

ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಚೌಧರಿ, ‘ರಾಜಸ್ಥಾನದ ಪೀಹ್ ಗ್ರಾಮದಲ್ಲಿ ನನಗೆ ಭೂಮಿ ಇದೆ. ಈ ಪ್ರದೇಶವು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ ಮತ್ತು ಅಂತರ್ಜಲ ಬಹುತೇಕ ಬತ್ತಿಹೋಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಳೆನೀರು ಕೊಯ್ಲಿಗಾಗಿ 2 ಕೋಟಿ ಲೀ. ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡವನ್ನು ಅಭಿವೃದ್ಧಿಪಡಿಸಿದ್ದೇನೆ. ಪಾಲಿಹೌಸ್ ಅನ್ನು ಸಹ ಸ್ಥಾಪಿಸಿದ್ದೇನೆ. 2018ರಲ್ಲಿ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಪಾಲಿಹೌಸ್ ಸ್ಥಾಪಿಸಿ, 6 ತಿಂಗಳ ಕಾಲ ಬೆಳೆ ಬೆಳೆದು, ಪರಿಶೀಲನಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಅದನ್ನು 2025ರಲ್ಲಿ ಬಿಡುಗಡೆ ಮಾಡಲಾಗಿದೆ. ನಾನು ಏನಾದರೂ ತಪ್ಪು ಮಾಡಿದ್ದರೆ, ಅಂತಹ ಫಲಕವನ್ನು ಏಕೆ ಹಾಕುತ್ತಿದ್ದೆ?’ ಎಂದು ಪ್ರಶ್ನಿಸಿದ್ದಾರೆ.

ವಿವಾದವೇಕೆ?:

ದಾಖಲೆಗಳ ಪ್ರಕಾರ, ಭಗೀರಥ್ ಚೌಧರಿ 2025ರ ಏ.15ರಂದು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ್ದರು. ಕೇವಲ 14 ದಿನಗಳಲ್ಲೇ, ಅಂದರೆ ಏ. 29ರಂದು ಅರ್ಜಿಗೆ ತಾತ್ವಿಕ ಅನುಮೋದನೆ ಸಿಕ್ಕಿತ್ತು. ತದನಂತರ 2026ರ ಮಾ.11ರಂದು ಅಂತಿಮ ಅನುಮೋದನೆ ದೊರೆತು, ಮಾ.30ರಂದು 99.03 ಲಕ್ಷ ರು.ಗಳ ಬಂಡವಾಳ ಹೂಡಿಕೆ ಸಬ್ಸಿಡಿಯನ್ನು ಸಚಿವರ ಬ್ಯಾಂಕ್ ಸಾಲದ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.

2025ರ ಮಾ.31ರಂದು ಪ್ರಧಾನಿ ಕಚೇರಿಗೆ ಚೌಧರಿ ಸಲ್ಲಿಸಿದ್ದ ಆಸ್ತಿ ಘೋಷಣೆಯಲ್ಲಿ ತಮ್ಮ ಪೀಹ್ ಗ್ರಾಮದ ಕೃಷಿ ಭೂಮಿಯ ಮೌಲ್ಯವನ್ನು 5.85 ಲಕ್ಷ ರು. ಎಂದು ತೋರಿಸಿದ್ದರು ಮತ್ತು ಒಟ್ಟು 4.41 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಘೋಷಿಸಿದ್ದರು. ಆದರೆ, ಈ ಸಬ್ಸಿಡಿ ಯೋಜನೆಯ ಬಗ್ಗೆ ಅದರಲ್ಲಿ ಯಾವುದೇ ನಿರ್ದಿಷ್ಟ ಉಲ್ಲೇಖವಿರಲಿಲ್ಲ.

ಇತ್ತೀಚೆಗಷ್ಟೇ ಮಧ್ಯಪ್ರದೇಶ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಿರುವ ಉಜ್ಜಯಿನಿ ಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್‌ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರು 45 ಕೋಟಿ ರು. ವೆಚ್ಚದಲ್ಲಿ 168 ಎಕರೆ ಭೂಮಿ ಖರೀದಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.