ಬಸ್ ನಿಲ್ದಾಣದಲ್ಲಿ ಸೌತೆಕಾಯಿ ವ್ಯಾಪಾರಕ್ಕೆ ಅವಕಾಶ ನೀಡಿ

| Published : May 18 2025, 01:13 AM IST

ಬಸ್ ನಿಲ್ದಾಣದಲ್ಲಿ ಸೌತೆಕಾಯಿ ವ್ಯಾಪಾರಕ್ಕೆ ಅವಕಾಶ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸೌತೆ ವ್ಯಾಪಾರಿಗಳ ತಟ್ಟೆಯನ್ನು ಹಿಡಿದು ಬಸ್ನ ಪ್ರಯಾಣಿಕರಿಗೆ ಸೌತೆಕಾಯಿ ಮಾರಾಟ ಮಾಡುವ ಮೂಲಕ ವಿಶಿಷ್ಟ ಪ್ರತಿರೋಧ

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಸೌತೆಕಾಯಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲು ಆಗ್ರಹಿಸಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ನಗರಸಭಾ ಸದಸ್ಯರು, ಆಟೋ ಚಾಲಕರು ಮತ್ತು ನಾಗರಿಕರು ದಿಢೀರ್ ಪ್ರತಿಭಟಿಸಿದರು.ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ನಗರಸಭಾ ಸದಸ್ಯರು ಮತ್ತು ನಾಗರಿಕರು ಸೌತೆ ವ್ಯಾಪಾರಿಗಳ ತಟ್ಟೆಯನ್ನು ಹಿಡಿದು ಬಸ್ನ ಪ್ರಯಾಣಿಕರಿಗೆ ಸೌತೆಕಾಯಿ ಮಾರಾಟ ಮಾಡುವ ಮೂಲಕ ವಿಶಿಷ್ಟ ಪ್ರತಿರೋಧವನ್ನು ತೋರಿದರು. ಯಾವುದೇ ಕಾರಣಕ್ಕೂ ಸೌತೆಕಾಯಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಡಿಪೋ ಮ್ಯಾನೇಜರ್ ಸುಬ್ರಮಣ್ಯ ಹೇಳಿದಾಗ ಗ್ರಾಮಾಂತರ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ದಿಢೀರ್ ಪ್ರತಿಭಟಿಸಿದರು. ಬಡವ್ಯಾಪಾರಿಗಳ ಹೊಟ್ಟೆಗೆ ತಣ್ಣೀರುಬಟ್ಟೆ ಹಾಕುತ್ತಿರುವ ಸಾರಿಗೆ ಅಧಿಕಾರಿಗಳಿಗೆ ಧಿಕ್ಕಾರ ಮೊಳಗಿಸಿದರು.ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಶಾಸಕ ಜಿ.ಡಿ. ಹರೀಶ್ ಗೌಡ ಅವರು ಫೋನ್ ಮೂಲಕ ಕೆ.ಎಸ್.ಆರ್.ಟಿ.ಸಿ ಎಂಡಿ ಅವರಿಗೂ ಮಾತನಾಡಿ, ವ್ಯಾಪಾರಕ್ಕೆ ಅವಕಾಶ ನೀಡಲು ಒತ್ತಾಯಿಸಿದ ಪರಿಣಾಮ ಎಂಡಿ ಕೂಡ ಒಪ್ಪಿಕೊಂಡು ವ್ಯಾಪಾರಕ್ಕೆ ಅನುವು ಮಾಡಿಕೊಡಲು ಅಧೀನ ಅಧಿಕಾರಿಳಿಗೆ ನಿರ್ದೇಶಿಸಿದ್ದಾರೆ. ಹೀಗಿದ್ದೂ ಹುಣಸೂರು ಡಿಪೋ ಮ್ಯಾನೇಜರ್ ಸುಬ್ರಮಣ್ಯ, ಸೆಕ್ಯೂರಿಟಿ ಅಧಿಕಾರಿ ರಘು ಮುಂತಾದವರು ಬಡವ್ಯಾಪಾರಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ವ್ಯಾಪಾರ ಮಾಡಲು ಬಂದರೆ ಅವರ ತಟ್ಟೆಗೆ ಫಿನಾಯಿಲ್ ಹಾಕುವುದಾಗಿ ಬೆದರಿಕೆ ಒಡ್ಡಿ ನಿಲ್ದಾಣದಿಂದ ಹೊರಕ್ಕೆ ದೂಡುತಿದ್ದಾರೆ. ಇದು ಯಾವ ನ್ಯಾಯ, ಕಳೆದ 25 ವರ್ಷಗಳಿಂದ ಇದನ್ನೇ ನಂಬಿ ಬದುಕುತ್ತಿರುವ 25ಕ್ಕೂ ಹೆಚ್ಚು ಕುಟುಂಬಗಳು ಜೀವನಕ್ಕೆ ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದೇಶವಿಲ್ಲ, ಮೆಮೋ ಮಹಿಮೆಯಂತೆ ಸೌತೆಕಾಯಿ ವ್ಯಾಪಾರವನ್ನು ನಿಲ್ದಾಣದೊಳಗೆ ಮಾಡಬಾರದೆಂಬ ಸರ್ಕಾರದ ಆದೇಶವಿದ್ದರೆ ತೋರಿಸಿ ಎಂದರೆ ತೋರಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ಮೆಮೋ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಅಧಿಕಾರಿ ನೀಡಿದ ಮೆಮೋಗೆ ಅಷ್ಟು ಅಧಿಕಾರ ಉಂಟೇ? ಬಸ್ ನಿಲ್ದಾಣದೊಳಗೆ ಕಾರ್ ಪಾರ್ಕಿಂಗ್ ಮಾಡಿದ್ದಾರೆ. ಈವರೆಗೆ ಕೆಎಸ್.ಆರ್.ಟಿಸಿಯಿಂದ ಕಾರ್ ಪಾರ್ಕಿಂಗ್ ಗೆ ಅಧಿಕೃತ ಮುದ್ರೆ ಸಿಕ್ಕಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ. ಅದಾಗಲೇ 20ಕ್ಕೂ ಹೆಚ್ಚು ಕಾರ್ಗಳು ಅಲ್ಲಿ ನಿಂತಿವೆಯಲ್ಲ. ಅವಕ್ಕೆ ಕಾನೂನಿಲ್ಲವೇ? ಮೆಮೋ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿಗಳು ನಿರುತ್ತರರಾದರು. ನಾಗರಿಕರು ಮತ್ತು ಇತರ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟಗೆ ತೆಗೆದುಕೊಂಡರು. ಸದಸ್ಯ ದೇವರಾಜ್ ಮಾತನಾಡಿ, ನಗರಸಭಾದ್ಯಕ್ಷರು ಈ ನಗರದ ಪ್ರಥಮ ಪ್ರಜೆ. ಅವರನ್ನು ಕಡಗಣಿಸಿ ಪ್ರತಿಭಟನೆ ನಡೆಸುವಂತೆ ಮಾಡಿರುವುದು ಇಡೀ ಹುಣಸೂರಿಗೆ ಅಪಮಾನ ಮಾಡಿದಂತೆ. ಕೆಎಸ್ಆರ್ಟಿಸಿ ಅಧಿಕಾರಿಗಳ ಈ ದುರ್ವತನೆ ಖಂಡನೀಯ. ಜನಪ್ರತಿನಿಧಿಗಳಾಗಿ ನಾವು ಬಡವರ ಪರವಾಗಿ ಬಂದಿದ್ದೇವೆ. ನಮ್ಮ ಕಾಳಜಿಯನ್ನು ಅರ್ಥ ಮಾಡಿಕೊಳ್ಳದೇ ಡಿಪೋ ಮ್ಯಾನೇಜರ್ ಭಂಡತನ ಪ್ರದರ್ಶಿಸುತ್ತಿರುವುದು ಖಂಡನೀಯವೆಂದು ಕಿಡಿಕಾರಿದರು. ಮಳೆಯಲ್ಲಿಯೇ ಮುಂದುವೆರೆದ ಪ್ರತಿಭಟನೆ ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ಪ್ರತಿಭಟನೆ 4 ಗಂಟೆಯವರೆಗೂ ಮುಂದುವೆರೆಯಿತು. ಹಿರಿಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದರು. ನಂತರ ಡಿಪೋ ಮ್ಯಾನೇಜರ್ ಪ್ರತಿಭಟನಾಕಾರರ ಬಳಿ ಬಂದು ಸೋಮವಾರ ಡಿಸಿ ಬರಲಿದ್ದು, ನಿಮ್ಮೊಂದಿಗೆ ಚರ್ಚಿಸಲಿದ್ದಾರೆ. ಪ್ರತಿಭಟನೆ ಹಿಂಪಡೆಯಲು ಮನವೊಲಿಸುವಲ್ಲಿ ಯಶಸ್ವಿಯಾದರು. ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿಸಮಿತಿ ಅಧ್ಯಕ್ಷ ಹರೀಶ್ಕುಮಾರ್, ಸದಸ್ಯರಾದ ಎಚ್.ಪಿ. ಸತೀಶ್ ಕುಮಾರ್, ಶ್ರೀನಾಥ್, ಯೂನೂಸ್ ಖಾನ್, ವಿವೇಕಾನಂದ, ಆಟೋ ಚಾಲಕರು ಇದ್ದರು.