ಕನ್ನಡಪ್ರಭ ವಾರ್ತೆ ಬೆಳಗಾವಿ
2021ರ ಜ.21ರಂದು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡಪರ ಸಂಘಟನೆಗಳು ಕನ್ನಡ ಧ್ವಜ ಹಾರಿಸಿದ್ದವು. ಈ ಘಟನೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಿವಸೇನೆ ಮುಖಂಡ ವಿಜಯ ದೇವಣೆ ಹಾಗೂ ಅವರ ಸಹಚರರು ಬೆಳಗಾವಿ ತಾಲೂಕಿನ ಕೋನೆವಾಡಿ ಗ್ರಾಮದಲ್ಲಿ ಭಗವಾ ಧ್ವಜ ಹಾರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಎರಡು ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಪ್ರಕರಣದಲ್ಲಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿಜಯ ದೇವಣೆ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ವಾರಂಟ್ ಜಾರಿಯಾಗಿತ್ತು. ಅದರಂತೆ ವಿಜಯ ದೇವಣೆ, ಸಂಗ್ರಾಮಸಿಂಗ್ ಕುಪೇಕರ್ ದೇಸಾಯಿ, ಸುನೀಲ ಶಿಂತ್ರೆ ಹಾಗೂ ಸಂತೋಷ ಮಳವೀಕರ್ ಬುಧವಾರ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಾಲ್ವರು ಆರೋಪಿಗಳ ವಾರಂಟ್‌ಗಳನ್ನು ಹಿಂಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು.