ಜಾತಿಗೂ ಕೈ, ಬಾಯಿ, ಮೆದುಳು ಮೂಡಿವೆ

KannadaprabhaNewsNetwork |  
Published : Feb 03, 2024, 01:50 AM IST
ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಎ.ಎನ್‌.ರಮೇಶ ಕವಿತೆ ವಾಚಿಸುತ್ತಿರುವುದು. | Kannada Prabha

ಸಾರಾಂಶ

ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟುಕೊಂಡು ನಡೆಯಿತ್ತಿರುವ ರಾಜಕೀಯ ಮೇಲಾಟ, ನಮ್ಮೊಳಗೆ ಜಾತಿ ಕಿಚ್ಚು ಹಚ್ಚುವುದು ಸೇರಿದಂತೆ ಇಡೀ ವ್ಯವಸ್ಥೆಯ ಮೇಲೆ ಜಾತಿ ಬೀರುವ ಪರಿಣಾಮ ಕುರಿತು ಅವರ ಕವಿತೆ ಜನರಲ್ಲಿ ಜಾಗೃತಿ

ಚಂದ್ರು ಕೊಂಚಿಗೇರಿ ಹಂಪಿ

ಜಾತಿಗೂ ಕೈ ಮೂಡಿವೆ, ಕೈಯಲ್ಲಿ ಹಿಡಿದ ದೊಣ್ಣೆ ಕಾವಾಗಿ ಅಕ್ರಾಳ ವಿಕ್ರಾಳ ಕುಣಿತ ಹೆಚ್ಚಾಗಿದೆ. ಜಾತಿಗೂ ಬಾಯಿ ಮತ್ತು ಮೆದುಳು ಮೂಡಿದ್ದು, ಸರ್ಕಾರವನ್ನೇ ಅಲ್ಲಾಡಿಸುವ ಹಂತಕ್ಕೆ ಬಂದಿದೆ. ಮಠ, ಮಂದಿರ ಹೊಕ್ಕ ಜಾತಿ ಹಗ್ಗವಾಗಿ, ಗಾಂಧೀಜಿ ಮತ್ತು ಅಂಬೇಡ್ಕರ್‌ ಪ್ರತಿಮೆಗೆ ನೇಣಾಗಿದೆ. ಹೀಗೆಂದು ಹುರಕಡ್ಲಿ ಶಿವಕುಮಾರ ಅವರ ಕವಿತೆಯ ಸಾಲುಗಳು ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಗಮನ ಸೆಳೆದವು.

ಹಂಪಿ ಉತ್ಸವದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಮೊದಲಿಗೆ ಶಿವಕುಮಾರ ಹುರಕಡ್ಲಿ ಅವರ ಕವಿತೆ ವಾಚನ ಎಲ್ಲರ ಗಮನ ಸೆಳೆಯುವ ಜತೆಗೆ ವ್ಯವಸ್ಥೆಯಲ್ಲಿನ ವಾಸ್ತವತೆಯನ್ನು ಕವಿತೆಯ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಿದರು.

ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟುಕೊಂಡು ನಡೆಯಿತ್ತಿರುವ ರಾಜಕೀಯ ಮೇಲಾಟ, ನಮ್ಮೊಳಗೆ ಜಾತಿ ಕಿಚ್ಚು ಹಚ್ಚುವುದು ಸೇರಿದಂತೆ ಇಡೀ ವ್ಯವಸ್ಥೆಯ ಮೇಲೆ ಜಾತಿ ಬೀರುವ ಪರಿಣಾಮ ಕುರಿತು ಅವರ ಕವಿತೆ ಜನರಲ್ಲಿ ಜಾಗೃತಿ ಮೂಡಿಸಿತು.

ಡಾ. ಇಮಾಮ್‌ ಸಾಹೇಬ್‌ ಹಡಗಲಿ ಅವರ, ಧರ್ಮ ಸಹಿಷ್ಣುತೆ ಕುರಿತು ಕವಿತೆಯಲ್ಲಿ ಈ ಹಿಂದೆ ಕಾಣದ ಅಸಹಿಷ್ಣುತೆ ಭುಗಿಲೆದ್ದಿದೆ. ಈಗ ದೇಶದೊಳಗೆ ಜಾತಿ, ದ್ವೇಷದ ಕಪ್ಪು ಛಾಯೆ ಆವರಿಸಿ ಮನದೊಳಗೆ ಮತಾಂಧ ಪುಂಡರ ಕುತಂತ್ರದಿಂದ ಅಸಹಿಷ್ಣುತೆ ಎಲ್ಲೆಲ್ಲೂ ತಾಂಡವವಾಡುತ್ತಿದೆ ಈ ದೇಶದೊಳಗೆ ಎಂಬ ಕವಿತೆಯ ಸಾಲುಗಳ ಮೂಲಕ ಧರ್ಮ, ಸಹಿಷ್ಣುತೆಯ ಸಾರ ಸಾರಿದರು.

ಕವಿ ಸಿದ್ದರಾಮ ಹಿರೇಮಠ ಅವರು ತಮ್ಮ ಕವಿತೆಯಲ್ಲಿ, ದೇಗುಲಗಳಿಗೆ ಬಂಗಾರ ಹೊದಿಕೆ ಹಾಕಿದರು. ಆದರೆ ಬದುಕನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಹೀಗೆ ಇಡೀ ಬದುಕಿನಲ್ಲಿ ನಡೆಯುತ್ತಿರುವ ಅವಾಂತರಗಳ ಕುರಿತು ಬೆಳಕು ಚೆಲ್ಲಿದರು.

ಜಗದೀಶ ಬೆನ್ನೂರು ತಮ್ಮ ಕವಿತೆಯಲ್ಲಿ ಅವ್ವನ ನೋವು, ಮನನೊಂದು ಮನೆ ಬಿಟ್ಟು ಹೋಗುವ ದೃಶ್ಯ, ಅತ್ತ ಅತ್ತೆ ಮನೆ ಬಿಡುತ್ತಿದಂತೆ ಸೊಸೆಯ ಮುಖ ಕಮಲದಂತೆ ಅರಳಿತ್ತು. ಇಂದಿನ ಮನೆಗಳಲ್ಲಿ ನಡೆಯುವ ಘಟನೆಗಳನ್ನು ಬಿಚ್ಚಿಟ್ಟರು.

ಅಕ್ಕಿ ಕೊಟ್ರೇಶ ಅವರು, ಒಂದು ಕವಿತೆಯಿಂದ ಏನು ಆಗಬಹುದು ಎಂಬ ವಿಷಯ ಕುರಿತು ಕೆಲವರನ್ನು ಹೊಗಳಿಕೆ, ತೆಗಳಿಕೆ, ಬಹಿಷ್ಕಾರ, ತಿರಸ್ಕಾರ, ಪುರಸ್ಕಾರ ಸೇರಿದಂತೆ ಎಲ್ಲ ರೀತಿಯ ನೋವು- ನಲಿವುಗಳನ್ನು ಒಂದು ಕವಿತೆ ಬರೆದಾಗ ಆಗುತ್ತದೆ, ಎಂದು ಅಕ್ಷರಗಳ ಮೂಲಕ ನೆರೆದಿದ್ದ ಸಹೃದಯರಿಗೆ ಮನ ಮುಟ್ಟುವಂತೆ ಕವಿತೆ ವಾಚಿಸಿದರು.

ಡಾ. ತಿಪ್ಪೇರುದ್ರ ಅವರು, ಜವರಾಯನ ಅವತಾರ ಕವಿತೆಯಲ್ಲಿ ಅಮರತ್ವವನ್ನು ಅಣಕಿಸಿ ಜವರಾಯ ಹೊರಟಿದ್ದಾನೆ. ಸಾವು ನಾನಾ ರೀತಿಯಲ್ಲಿ ಹೆಸರಿಸುತ್ತಾ, ಆತ್ಮಹತ್ಯೆ, ಬೆಂಕಿಯಲ್ಲಿ ಬೇಯುವುದು ಹೀಗೆ ಸಾವಿನ ನಾನಾ ರೀತಿಯಲ್ಲಿ ಹೆಸರಿಸಿದರು,

ಕವಿ ಪಿ.ಆರ್‌. ವೆಂಕಟೇಶ ಅವರ ಹೇ ರಾಮ್‌ ಕವಿತೆಯ ಶೀರ್ಷಿಕೆಯಲ್ಲಿ ರಾಮ ಕೂಗಿದರೂ ಬರಲಿಲ್ಲ, ಅವನು ಈಗ ಬದಲಾಗಿ ಬಿಟ್ಟಿದ್ದಾನೆ, ಅವನಿಗೆ ಗುಡಿ ಗುಂಡಾರಗಳಿಲ್ಲ, ಕೇಸರಿ ತುಂಡು ಹೊತ್ತುಕೊಂಡಿದ್ದಾನೆ, ರಾಮನಿಗೆ ಧರ್ಮವಿಲ್ಲ ಎಂಬ ವಿಷಯ ಕುರಿತು ಕವಿತೆ ವಾಚಿಸುತ್ತಾ, ರಾಮಮಂದಿರ ನಿರ್ಮಾಣ ಮತ್ತು ರಾಜಕೀಯ ಮೇಲಾಟಗಳು ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬಗ್ಗೆ ತಿಳಿವಳಿಕೆ ಮೂಡಿಸಿದರು.

ಮಹಮದ್‌ ಬಾಷ ಗುಳ್ಯಂ ಅವರು ತಮ್ಮ ಕವಿತೆಯ ಮೂಲಕ ಹಮಾಸ್‌, ಇಸ್ರೇಲ್‌ ಯುದ್ಧ ಸೇರಿದಂತೆ ಇಡೀ ವಿಶ್ವದಲ್ಲೇ ನಡೆಯುತ್ತಿರುವ ತಲ್ಲಣಗ‍ಳ ಕುರಿತು ಕವಿತೆ ವಾಚಿಸಿದರು.

ಎ.ಎನ್‌. ರಮೇಶ, ಅಜೇಯ ಬಣಕಾರ, ಕೆ.ವಿ. ನಾಗಿರೆಡ್ಡಿ, ಅಂಬಿಗರ ಮಂಜುನಾಥ, ಚಾಂದಬಾಷ, ಬಸವಾರಾಜಪ್ಪ ಪೂಜಾರ, ಸಿದ್ದಲಿಂಗಪ್ಪ, ವಸಂತಕುಮಾರ ಸೇರಿದಂತೆ 37ಕ್ಕೂ ಹೆಚ್ಚು ಸಾಹಿತಿಗಳು ತಮ್ಮ ಕವಿತೆ ವಾಚಿಸಿದರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಹಂಪಿ ಉತ್ಸವದಲ್ಲಿ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳ ಕವಿಗೋಷ್ಠಿ ಆಯೋಜಿಸಿರುವುದು ತುಂಬಾ ಸಂತೋಷದ ಸಂಗತಿ. ಕವಿತೆಗಳು ವಾಸ್ತವತೆಯ ಕುರಿತು ಸೃಜನಾತ್ಮಕವಾಗಿ ತಮ್ಮೊಳಗಿನ ಭಾವನೆಗಳಿಗೆ ಅಕ್ಷರದ ಮೂಲಕ ಜೀವ ತುಂಬಿ ಸುಂದರ ಕವಿತೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಯುವ ಸಾಹಿತಿಗಳ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಮತ, ಧರ್ಮಗಳ ಹೆಸರಿನಲ್ಲಿ ಮೌಢ್ಯ ಬಿತ್ತುವ ವಿರುದ್ಧ ಕವಿತೆ ರಚಿಸಿ ಎಂದರು.

ಅಮರೇಶ ನುಗುಡೋಣಿ, ದಯಾನಂದ ಕಿನ್ನಾಳ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ