ಜಾತಿಗಣತಿ ಮುಕ್ತಾಯ : ಗದಗ ರಾಜ್ಯಕ್ಕೇ ಫಸ್ಟ್‌

KannadaprabhaNewsNetwork |  
Published : Oct 10, 2025, 01:00 AM IST
ಜಾತಿ ಗಣತಿ | Kannada Prabha

ಸಾರಾಂಶ

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯು ಶೇಕಡ 102.29ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.

  ಚಾಮರಾಜನಗರ/ ಗದಗ :  ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯು ಶೇಕಡ 102.29ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಗದಗ ಜಿಲ್ಲೆಯು ಶೇ.100 ಸಮೀಕ್ಷೆ ಪೂರ್ಣಗೊಳಿಸಿದೆ. ರಾಜ್ಯಾದ್ಯಂತ ನಾಗರಿಕರ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ಕಾರ್ಯವು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿದೆ. ಈ ಸಮೀಕ್ಷೆಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಶೇ.101.87, ಗುಂಡ್ಲುಪೇಟೆ ತಾಲೂಕು ಶೇ.99.61, ಕೊಳ್ಳೇಗಾಲ ತಾಲೂಕು ಶೇ.96.80, ಯಳಂದೂರು ತಾಲೂಕಿನಲ್ಲಿ 96.80ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. 2,56,499 ಮನೆಗಳಲ್ಲಿ ಸಮೀಕ್ಷೆ ಗುರಿ ಇದ್ದು, 2,59,800 ಮನೆಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಒಟ್ಟಾರೆ ಚಾಮರಾಜನಗರ ಜಿಲ್ಲೆ ಶೇ.101.29ರಷ್ಟು ಪ್ರಗತಿ ಸಾಧಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷಾ ಕಾರ್ಯವನ್ನು ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಪ್ರತಿದಿನ ವಿಡಿಯೋ ಸಂವಾದ ನಡೆಸಿ ಗಣತಿದಾರರಿಗೆ ಗುರಿಯನ್ನು ನಿಗದಿಪಡಿಸಿ ಆಯಾ ದಿನ ಪ್ರಗತಿಯನ್ನು ಪರಿಶೀಲಿಸಿ, ಉತ್ಸುಕತೆಯಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದ್ದಾರೆ. ಇದರಿಂದ ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಗಣತಿದಾರರು ಸಂಪೂರ್ಣವಾಗಿ ತಮ್ಮನ್ನು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿರುವುದರಿಂದ ಅ.9ರ ವರದಿಯಂತೆ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಭಾಗವು ಅರಣ್ಯ ಪ್ರದೇಶದಿಂದ ಕೂಡಿದ್ದು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಗ್ರಾಮ/ಪೋಡು/ಹಾಡಿಗಳಲ್ಲಿ (ಟೆಲಿಕಾಂ ಶ್ಯಾಡೋ ಏರಿಯಾ) ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲದಿರುವುದನ್ನು ಜಿಲ್ಲಾಡಳಿತವು ಪರಿಗಣಿಸಿ ಕಾಡಂಚಿನ ಗ್ರಾಮ/ಪೋಡು/ಹಾಡಿಗಳನ್ನು ಗುರುತಿಸಿ ಅವುಗಳನ್ನು ಕ್ಯಾಂಪ್ ಮೋಡ್ ಎಂದು ಪರಿಗಣಿಸಿ ನೆಟ್ ವರ್ಕ್ ದೊರಕುವ ಪ್ರದೇಶಗಳಲ್ಲಿ ಕ್ಯಾಂಪ್‍ಗಳನ್ನು ಸ್ಥಾಪಿಸಿ ವಿವಿಧ ಇಲಾಖೆಯ ಸರ್ಕಾರಿ ವಾಹನಗಳಲ್ಲಿ ಗ್ರಾಮಸ್ಥರನ್ನು ಕ್ಯಾಂಪ್‍ಗಳಿಗೆ ಕರೆದುಕೊಂಡು ಬಂದು ಸಮೀಕ್ಷೆ ನಡೆಸಲಾಗಿದೆ. ಯಾವುದೇ ಮನೆಯು ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ಕೂಂಬಿಂಗ್ ನಡೆಸಿ ಪರಿಶೀಲಿಸಲಾಗಿದೆ.

ಇನ್ನು ಗದಗ ಜಿಲ್ಲೆಯು ಶೇ.100 ಸಮೀಕ್ಷೆ ಪೂರ್ಣಗೊಳಿಸಿದೆ. ಜಿಲ್ಲೆಯಲ್ಲಿ ಒಟ್ಟು 2,84,473 ಮನೆಗಳ ಸಮೀಕ್ಷೆಯ ಗುರಿ ಹೊಂದಲಾಗಿತ್ತು. ಆ ಪೈಕಿ 2,68,100 ಮನೆಗಳ ಗಣತಿ ಕಾರ್ಯ ಪೂರ್ಣಗೊಳಿಸಲಾಗಿದೆ. ಅದೇ ರೀತಿ 16,962 ಮನೆಯಲ್ಲಿ ಯಾರೂ ಇರದ ಕಾರಣ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬೀಗ ಹಾಕಿದ್ದ ಮತ್ತು ಖಾಲಿ ಇದ್ದ ಮನೆಗಳಿಗೂ ಸ್ಟಿಕ್ಕರ್‌ ಅಂಟಿಸಲಾಗಿದ್ದು, ಇದರಿಂದ ದತ್ತಾಂಶದಲ್ಲಿ ಕೆಲವು ನ್ಯೂನತೆಗಳು ಉಂಟಾಗಿದ್ದವು. ಜಿಲ್ಲಾಡಳಿತವು ಈ ನ್ಯೂನತೆಗಳನ್ನು ತ್ವರಿತವಾಗಿ ಸರಿಪಡಿಸಿ, ಬುಧವಾರ ಸಂಜೆ ವೇಳೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.

ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಸಹಕಾರ ನೀಡಿದ್ದರಿಂದ ಹಾಗೂ ನೆಟ್ ವರ್ಕ್ ಸಮಸ್ಯೆ ಇದ್ದ 94 ಕಡೆ ವಿಶೇಷ ಶಿಬಿರ ಆಯೋಜಿಸಿ ಸಮೀಕ್ಷೆ ಮಾಡಿದ್ದರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಚಾಮರಾಜನಗರ ಜಿಲ್ಲೆ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ.

-ಶಿಲ್ಪಾನಾಗ್‌, ಜಿಲ್ಲಾಧಿಕಾರಿ, ಚಾಮರಾಜನಗರ

PREV
Read more Articles on

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ