ಜಾತಿ ಗಣತಿಯಿಂದಾಗಿ ಹಲವರಿಗೆ ಗೃಹಜ್ಯೋತಿ ಶಾಕ್‌!

KannadaprabhaNewsNetwork |  
Published : Sep 25, 2025, 01:00 AM ISTUpdated : Sep 25, 2025, 05:51 AM IST
KEB | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (ಜಾತಿಗಣತಿ) ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳು ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್‌ನಲ್ಲಿ ತಡವಾಗಿ ಮೀಟರ್‌ ರೀಡಿಂಗ್‌ ನಡೆದಿದ್ದು, ಬಿಲ್‌ನಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ‘ಗೃಹಜ್ಯೋತಿ’ ಪ್ರಯೋಜನ ಸಿಗದಂತಾಗಿದೆ.

  ಬೆಂಗಳೂರು :  ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (ಜಾತಿಗಣತಿ) ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳು ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್‌ನಲ್ಲಿ ತಡವಾಗಿ ಮೀಟರ್‌ ರೀಡಿಂಗ್‌ ನಡೆದಿದ್ದು, ಬಿಲ್‌ನಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ‘ಗೃಹಜ್ಯೋತಿ’ ಪ್ರಯೋಜನ ಸಿಗದಂತಾಗಿದೆ.

ಪ್ರತಿ ತಿಂಗಳು ವಿದ್ಯುತ್‌ ಮೀಟರ್‌ ರೀಡರ್‌ಗಳು ನಿಗದಿತ ದಿನಾಂಕದಿಂದ ನಿಗದಿತ ದಿನಾಂಕದವರೆಗೆ ಬಳಕೆಯಾಗಿರುವ ವಿದ್ಯುತ್‌ ಯುನಿಟ್‌ ಸಂಖ್ಯೆ ಆಧರಿಸಿ ಮೀಟರ್‌ ರೀಡ್‌ ಮಾಡುತ್ತಿದ್ದರು. ಸಂಬಂಧಪಟ್ಟ ಬಿಲ್‌ ಅನ್ನು ಗ್ರಾಹಕರಿಗೆ ನೀಡಿ ಪಾವತಿಸುವಂತೆ ಸೂಚಿಸುತ್ತಿದ್ದರು.

ಆದರೆ, ಆಗಸ್ಟ್‌ನಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳಿಗೆ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಗೆ ಮನೆ ಆಯ್ಕೆ ಮಾಡಿರುವ ಕುರಿತು ‘ಯುಎಚ್ಐಡಿ’ ಸ್ಟಿಕ್ಕರ್‌ ಅಂಟಿಸುವ ಜವಾಬ್ದಾರಿ ನೀಡಿತ್ತು. ಇದಕ್ಕೆ ಕಾಲಮಿತಿಯನ್ನೂ ನಿಗದಿ ಮಾಡಿತ್ತು. ಹೀಗಾಗಿ ಎಲ್ಲಾ ಮೀಟರ್‌ ರೀಡರ್‌ಗಳು ಸ್ಟಿಕ್ಕರ್‌ ಅಂಟಿಸುವ ಕೆಲಸದಲ್ಲಿದ್ದರು. ಮೀಟರ್‌ ರೀಡಿಂಗ್‌ಗೆ ತಡವಾಗಿ ಹೋಗಿದ್ದರು, 30 ದಿನಗಳ ಬಳಕೆಯನ್ನು ಪರಿಗಣಿಸಿ ಬಿಲ್‌ ಜನರೇಟ್‌ ಮಾಡದೆ 35-40 ದಿನಗಳ ಬಳಕೆಯನ್ನು ಬಿಲ್‌ ಮಾಡಿದ್ದಾರೆ. ಹೀಗಾಗಿ ಮಾಸಿಕ 200 ಯುನಿಟ್‌ಗಿಂತ ಬಳಕೆ ಹೆಚ್ಚಾಗಿ, ಪ್ರತಿ ತಿಂಗಳು ಗೃಹ ಜ್ಯೋತಿ ಫಲಾನುಭವಿ ಆಗುತ್ತಿದ್ದ ಗ್ರಾಹಕರು ಪೂರ್ಣ ಮೊತ್ತ ಭರಿಸುವಂತಾಗಿದೆ.

ಮೀಟರ್‌ ರೀಡರ್‌ ಯಡವಟ್ಟಿಗೆ ದುಬಾರಿ ಬಿಲ್‌:

ಉದಾಹರಣೆಗೆ ಸಹಕಾರ ನಗರ ವ್ಯಾಪ್ತಿಯ ಜಕ್ಕೂರಿನ ನಿವಾಸಿ ಒಬ್ಬರಿಗೆ ಎಂಟು ದಿನ ತಡವಾಗಿ ಬಿಲ್‌ ನೀಡಿದ್ದು, ಪರಿಣಾಮ ಪ್ರತಿ ತಿಂಗಳು ಗೃಹಜ್ಯೋತಿ ವ್ಯಾಪ್ತಿಗೆ ಬರುತ್ತಿದ್ದ ಅವರು ಈಗ ದುಬಾರಿ ಮೊತ್ತ ತೆರುವಂತಾಗಿದೆ.

ಈ ಬಗ್ಗೆ ಮಾತನಾಡಿರುವ ವಾಸುದೇವ ಶೆಟ್ಟಿ ಎಂಬ ಗ್ರಾಹಕರು, ನಮ್ಮ ಭಾಗದಲ್ಲಿ ಪ್ರತಿ ತಿಂಗಳು 8ನೇ ತಾರೀಖಿಗೆ ಮೀಟರ್‌ ರೀಡಿಂಗ್‌ಗೆ ಬರಬೇಕಿದ್ದ ರೀಡರ್‌ 10 ದಿನ ತಡವಾಗಿ ಅಂದರೆ ಆ. 18ರಂದು ಬಂದಿದ್ದರು. ಆದರೆ ಬಿಲ್‌ನಲ್ಲಿ ಬಿಲ್‌ ಅವಧಿ 08-08-2025- 08-09-2025 ಎಂದೇ ನಮೂದಾಗಿದೆ. ಪ್ರತಿ ತಿಂಗಳು 200 ಯುನಿಟ್‌ಗಿಂತ ಕಡಿಮೆ ಬರುತ್ತಿದ್ದ ನಮ್ಮ ಮೀಟರ್‌ನಲ್ಲಿ ಹೆಚ್ಚುವರಿ 8 ದಿನಗಳ ಅವಧಿಯ ಪರಿಣಾಮ 248 ಯುನಿಟ್‌ ಬಳಕೆ ಮಾಡಿರುವುದಾಗಿ ತೋರಿಸಿದೆ. ಇದರಿಂದ ನಾವು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯುವ ಅವಕಾಶದಿಂದ ವಂಚಿತರಾಗಿದ್ದೇವೆ. ನಮ್ಮದೇ ಮನೆಯ ಮತ್ತೊಂದು ಸಂಪರ್ಕಕ್ಕೆ ಪ್ರತಿ ತಿಂಗಳು 58 ಯುನಿಟ್‌ ಉಚಿತ ವಿದ್ಯುತ್‌ ಬರುತ್ತಿತ್ತು. ಈ ತಿಂಗಳು 84 ಯುನಿಟ್‌ ಆಗಿದೆ. ಹೆಚ್ಚುವರಿ ಮೊತ್ತ ಪಾವತಿಸುವಂತಾಗಿದೆ. ಇದೇ ರೀತಿ ನಮ್ಮ ಭಾಗದ ಹಲವರಿಗೆ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಗಣತಿ ಹಣ ಈ ರೀತಿ ವಸೂಲಿಯೇ?:

ಈ ಬಗ್ಗೆ ಖಾರವಾಗಿ ಪ್ರಶ್ನೆ ಮಾಡಿರುವ ವಾಸುದೇವ ಶೆಟ್ಟಿ ಅವರು, ಗಣತಿಯವರಿಗೆ ಕೊಡುವ ಹಣವನ್ನು ಸರ್ಕಾರ ಈ ರೀತಿಯಲ್ಲಿ ಸಂಗ್ರಹ ಮಾಡುತ್ತಿದೆಯೇ? ಎಂಬ ಪ್ರಶ್ನೆಯನ್ನು ವಿಧಿ ಇಲ್ಲದೇ ಸರ್ಕಾರಕ್ಕೆ ಕೇಳಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ನಿಗದಿತ ದಿನಾಂಕದಿಂದ ಮತ್ತೊಂದು ನಿಗದಿತ ದಿನಾಂಕದವರೆಗೆ ಮೀಟರ್‌ ರೀಡಿಂಗ್‌ ಮಾಡಿ ಬಿಲ್‌ ನೀಡುತ್ತಿದ್ದ ಬೆಸ್ಕಾ ಸಿಬ್ಬಂದಿ

ಆದರೆ ಇ ಬಾರಿ ಜಾತಿಗಣತಿಗೆ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸಕ್ಕೆ ಮೀಟರ್‌ ರೀಡರ್‌ ಬಳಸಿಕೊಂಡಿದ್ದ ಹಿಂದುಳಿದ ವರ್ಗಗಳ ಆಯೋಗ

ಮನೆಗೆ ಸಿಕ್ಕರ್‌ ಅಂಟಿಸುವ ಕೆಲಸದಲ್ಲಿ ನಿರತರಾದ ಕಾರಣ ನಿಗದಿತ ದಿನದಂದು ಮನೆಗಳ ಮೀಟರ್‌ ರೀಡಿಂಗ್‌ ಸಾಧ್ಯವಾಗದೇ ಗ್ರಾಹಕರಿಗೆ ಶಾಕ್‌

30 ದಿನದ ಬದಲಾಗಿ 35-40 ದಿನಗಳ ರೀಡಿಂಗ್‌ ಪರಿಣಾಮ, ಮಾಸಿಕ 200 ಯುನಿಟ್‌ ದಾಟಿದ ವಿದ್ಯುತ್‌ ಬಳಕೆ. ಹೀಗಾಗಿ ಪೂರ್ಣ ಹಣಕಟ್ಟು ಸಮಸ್ಯೆ

ಬಿಲ್‌ನಲ್ಲಿ 30 ದಿನಗಳೆಂದೇ ತೋರಿಸಿದರೂ ಹಲವು ಗ್ರಾಹಕರಿಗೆ ಏಕಾಏಕಿ ಬಳಕೆ ಪ್ರಮಾಣದಲ್ಲಿ ಏರಿಕೆ ದಾಖಲು. ಈ ಎಡವಟ್ಟಿಗೆ ಗ್ರಾಹಕರ ಆಕ್ರೋಶ

PREV
Read more Articles on

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ