ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್‌ಎಂವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ 25ನೇ ಸೋಮವಾರದ ಚಳವಳಿಯಲ್ಲಿ ಅವರು ಮಾತನಾಡಿದರು.
ನೀರಿಲ್ಲದ ಸಮಯದಲ್ಲಿ ರೈತರಿಗೆ ನೀರೊದಗಿಸಲು ಪೇಚಾಡುವ ಸರ್ಕಾರಗಳು ಹೆಚ್ಚುವರಿ ನೀರು ಹರಿದುಬಂದಾಗ ಅದನ್ನು ಯೋಜಿತ ರೀತಿಯಲ್ಲಿ ಸಂಗ್ರಹಿಸುವುದಕ್ಕೆ, ಹೊಸದಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ತುಂಬಿಸಲು, ಎಲ್ಲಾ ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಸಂಪರ್ಕಿಸುವುದಕ್ಕೆ ಯೋಜನೆಯನ್ನು ರೂಪಿಸಿಲ್ಲ. ವ್ಯರ್ಥವಾಗಿ ನೀರನ್ನು ಹರಿಯಬಿಟ್ಟು ಕುಳಿತಿರುವುದು ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.ಕೆಆರ್‌ಎಸ್ ತುಂಬಿ ಹರಿಯುತ್ತಿರುವ ಈ ಸಮಯದಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟಿ ನೀರನ್ನು ಸಂಗ್ರಹಿಸಲು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ದನಿ ಎತ್ತಬೇಕು. ಅಮೂಲ್ಯವಾಗಿರುವ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ಬಿಡಬಾರದು. ವಿಶ್ವೇಶ್ವರಯ್ಯ ನಾಲೆಗಳಿಗೆ ವರ್ಷಪೂರ್ತಿ ನೀರು ಹರಿಸುವಂತೆ ಒತ್ತಾಯಿಸಿದರು.
ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿದೆ. ಕರ್ನಾಟಕಕ್ಕೆ ನೀರಿನ ಅವಶ್ಯಕತೆ ಇಲ್ಲ. ಕಾವೇರಿ ನೀರು ನಮ್ಮ ನೀರು ಎಂದು ಪರಿಗಣಿಸಬೇಕೆಂದು ತಮಿಳುನಾಡು ವಾದ ಮಂಡಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗುತ್ತದೆ, ನ್ಯಾಯ ಮಂಡಳಿ ತೀರ್ಪು, ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ ಪ್ರಾಧಿಕಾರದ ವಿರುದ್ಧ ನಿರಂತರ ಚಳವಳಿಗಳು ಅಗತ್ಯವಿದ್ದು, ಸರ್ಕಾರ ಕಾವೇರಿ ವಿಷಯವನ್ನು ಕಾನೂನಾತ್ಮಕವಾಗಿ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಚಳವಳಿಯ ಸ್ವರೂಪ ಬದಲಾಯಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಎಂ.ಎಲ್.ತುಳಸೀಧರ, ಎಸ್.ನಾರಾಯಣ, ಶಂಕರೇಗೌಡ, ಬೋರಲಿಂಗಯ್ಯ, ನಾರಾಯಣಸ್ವಾಮಿ, ಎಚ್.ಡಿ.ದೇವೇಗೌಡ, ಇಂದಿರಾ, ದೇವೀರಮ್ಮ, ಚಿಕ್ಕತಾಯಮ್ಮ ಭಾಗವಹಿಸಿದ್ದರು.
- ಸುನಂದಾ ಜಯರಾಂ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಸಂಚಾಲಕಿ