ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ನಾಲ್ವರ ಸೆರೆ

KannadaprabhaNewsNetwork |  
Published : Oct 10, 2026, 03:45 AM IST
Book Release 2 | Kannada Prabha

ಸಾರಾಂಶ

ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ರೌಡಿಗಳ ಮನೆಗಳ ಮೇಲೆ, ಹಳೇ ಪ್ರಕರಣದ ಆರೋಪಿಗಳ ನಿವಾಸ ಮೇಲೆ ಹಾಗೂ ಪಿಕ್‌ ಪಾಕೆಟ್‌ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ರೌಡಿಗಳ ಮನೆಗಳ ಮೇಲೆ, ಹಳೇ ಪ್ರಕರಣದ ಆರೋಪಿಗಳ ನಿವಾಸ ಮೇಲೆ ಹಾಗೂ ಪಿಕ್‌ ಪಾಕೆಟ್‌ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಸಮಾಜಘಾತುಕ ಶಕ್ತಿಗಳು ಹಾಗೂ ಅಪರಾಧ ಕೃತ್ಯಗಳ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡವು ಪಶ್ಚಿಮ ವಿಭಾಗದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆಯನ್ನು ನಡೆಸಿದೆ.

ಈ ವೇಳೆ ರೌಡಿಶೀಟರ್‌ಗಳು, ಡ್ರಗ್ ಪೆಡ್ಲರ್‌ಗಳು, ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿರುವವರ ಮನೆ ಮತ್ತು ಕಚೇರಿಗಳನ್ನು ಪರಿಶೀಲಿಸಲಾಯಿತು. ಅಲ್ಲದೇ ಅನುಮಾನಾಸ್ಪದವಾಗಿ ಓಡಾಡುವವರು, ದೋಷಪೂರಿತ ನಂಬರ್ ಪ್ಲೇಟ್ ವಾಹನಗಳನ್ನು ಬಳಸುವವರು, ಅಪ್ರಾಪ್ತ ವಾಹನ ಚಾಲಕರು ಹಾಗೂ ಈ ಪ್ರದೇಶದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ಜರುಗುವ ಪ್ರದೇಶಗಳು, ಬಾರ್ ಆ್ಯಂಡ್‌ ರೆಸ್ಟೋರೆಂಟ್‌, ಪಾರ್ಕ್‌ಗಳನ್ನು ಪರಿಶೀಲನೆ ನಡೆಸಲಾಯಿತು. ವಿಶೇಷ ಕಾರ್ಯಾಚರಣೆ ವೇಳೆಯಲ್ಲಿ ರೌಡಿಶೀಟರ್‌ಗಳಿಗೆ ಸೇರಿದ 72 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಎಂಒ ವ್ಯಕ್ತಿಗಳಿಗೆ ಸೇರಿದ 65, ಡ್ರಗ್‌ ಪೆಡ್ಲರ್‌ಗಳು ಮತ್ತು ಬಳಕೆದಾರರಿಗೆ ಸೇರಿದ 23 ಸ್ಥಳಗಳು, 270 ವಾಹನಗಳ ಪರಿಶೀಲನೆ, ವಾರೆಂಟ್‌ ಅಥವಾ ಪ್ರೊಕ್ಲಮೇಷನ್‌ ಜಾರಿ ಆಗಿದ್ದ 4 ಆರೋಪಿಗಳು, ಹೆಚ್ಚು ಅಪರಾಧ ನಡೆಯುವ 72 ಸ್ಥಳಗಳು ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಪಾರ್ಕ್‌ಗಳು, ಇತರೆ 29 ಸ್ಥಳಗಳ ಮೇಲೆ ಸೇರಿ ಒಟ್ಟು 535 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

ಆರೋಪಿಗಳ ಬಂಧನ:

ವಿಶೇಷ ಕಾರ್ಯಾಚರಣೆಯ ವೇಳೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಿತೇಂದ್ರ ರತನ್‌, ಗಲಾಟೆ, ಹಲ್ಲೆ ಮತ್ತು ದೊಂಬಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೋಸಿನ್‌ ಪಾಷ(40), ಮಾದಕವಸ್ತು ಬಳಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಯ್ಯದ್‌ ಜಮಾಲ್‌(27), ಇಮಾತ್‌ (23), ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘಿಸಿದ 10 ಜನರ ವಿರುದ್ಧ ಕೆ.ಪಿ ಆಕ್ಟ್‌ ಅಡಿಯಲ್ಲಿ ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರ ವಿರುದ್ಧ 2 ಪ್ರಕರಣ ದಾಖಲಿಸಿ 11 ವಾಹನ ಸವಾರರಿಗೆ 23,500 ದಂಡ ವಿಧಿಸಲಾಗಿದೆ. ಅಪ್ರಾಪ್ತರಿಗೆ ವಾಹನ ನೀಡಿದ ಇಬ್ಬರು ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೋಷಪೂರಿತ ನಂಬರ್‌ ಪ್ಲೇಟ್‌ ಮತ್ತು ಹಳೆಯ ಬಾಕಿ ಪ್ರಕರಣದಲ್ಲಿ 11,500 ರು.ದಂಡ ಸಂಗ್ರಹಿಸಲಾಗಿದೆ.

ಪುಂಡಾಟ ಮೆರೆದ ಆರೋಪಿ!:

ಸಿಸಿಬಿ ದಾಳಿಯ ವೇಳೆ ಕಾಂಗ್ರೆಸ್ ಮುಖಂಡನ ತಮ್ಮ ಮೌಸೀನ್ ಪಾಷಾ ಎಂಬಾತ ಪೊಲೀಸರಿಗೆ ಅವಾಜ್‌ ಹಾಕಿ ಪುಂಡಾಟ ಮರೆದಿದ್ದಾನೆ ಎನ್ನಲಾಗಿದೆ. ಗಲಭೆ, ದೊಂಬಿ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ. ಮೌಸೀನ್ ಪಾಷಾ, ಚಾಮರಾಜಪೇಟೆಯ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಸಹೋದರನಾಗಿದ್ದು, ಈತನ ಮೇಲೆ ಎರಡೆರಡೂ ವಾರೆಂಟ್ ಜಾರಿಯಾಗಿದ್ದರೂ ಕೂಡ ನ್ಯಾಯಾಲಯಕ್ಕೆ ಹಾಜರಾಗದೆ ಉದ್ಧಟತನ ತೋರಿದ್ದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ
ಪ್ರೆಸಿಡೆನ್ಸಿ ವಿವೀಲಿ ಎ ಫಾರ್‌ ಆನಂದ್‌ಚಿತ್ರೀಕರಣ ಆರಂಭಿಸಿದ ನಟ ಶಿವಣ್ಣ