ಹಾಸನ ಜಿಲ್ಲೆ ಬೇಲೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಚಿಕ್ಕಮಗಳೂರಿನಲ್ಲಿ ಜನಾಕ್ರೋಶ ತಾರಕಕ್ಕೇರಿದೆ
ಚಿಕ್ಕಮಗಳೂರು : ಹಾಸನ ಜಿಲ್ಲೆ ಬೇಲೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಚಿಕ್ಕಮಗಳೂರಿನಲ್ಲಿ ಜನಾಕ್ರೋಶ ತಾರಕಕ್ಕೇರಿದೆ. ಆನೆಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯ ವಿವಿಧೆಡೆ ಸೋಮವಾರವೂ ಬೃಹತ್ ಪ್ರತಿಭಟನೆಗಳು ನಡೆದವು. ಹೀಗಾಗಿ, ಜನಾಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ, ಆನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹೋರಾಟದ ಕೇಂದ್ರ ಬಿಂದು ಆಗಿರುವ ಮೂಡಿಗೆರೆಯಲ್ಲಿ ನಡೆದ ಸರ್ವಪಕ್ಷಗಳ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ್ದ ಪರಿಷತ್ ನ ಮಾಜಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ‘ಪ್ರಾಣ ಹೋದರೂ ಲೆಕ್ಕಿಸುವುದಿಲ್ಲ, ಆನೆಯನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ನಾವೇ ಮಾಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ತಡೆ ನಡೆಸಿ ಆಕ್ರೋಶ:
ಚಿಕ್ಕಮಗಳೂರು ತಾಲೂಕಿನಲ್ಲಿ ಶಿರವಾಸೆ-ಮಲ್ಲಂದೂರು-ಹೊನ್ನಾಳ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು, ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಭದ್ರಾ ಅಭಯಾರಣ್ಯಕ್ಕೆ ಹಾಸನ ಜಿಲ್ಲೆಯ ಆನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ರಸ್ತೆ ತಡೆಯಿಂದಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿ, ವಾಹನ ಸವಾರರು ಹಾಗೂ ಪ್ರವಾಸಿಗರು ಪರದಾಡುವಂತಾಯಿತು.
ಮಾಜಿ ಶಾಸಕ ಸುರೇಶ್ ನೇತೃತ್ವದಲ್ಲಿ ತರೀಕೆರೆಯ ಸಾಲುಮರದಮ್ಮ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸುವ ಪ್ರಸ್ತಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಇದೇ ವೇಳೆ, ಪರಿಷತ್ ನ ಮಾಜಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ನೇತೃತ್ವದಲ್ಲಿ ಮೂಡಿಗೆರೆಯಲ್ಲಿ ಸರ್ವಪಕ್ಷಗಳ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ರೈತ ಸಂಘದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆನೆಗಳನ್ನು ಕೂಡಲೇ ವಾಪಸ್ ಹಿಮ್ಮೆಟ್ಟಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.
ಕಾರ್ಯಾಚರಣೆ ಸ್ಥಗಿತ:
ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ, ಮೂಡಿಗೆರೆ ತಾಲೂಕಿನ ಗೋಣಿಬೀಡು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಶಾಸಕಿ ನಯನಾ ರಾಜೀನಾಮೆ ಹೈಡ್ರಾಮಾ!
ಬೆಂಗಳೂರು: ಹಾಸನ ಜಿಲ್ಲೆ ಬೇಲೂರಿಂದ ತಮ್ಮ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಆನೆ ಓಡಿಸಿದ್ದಕ್ಕೆ ಸಿಟ್ಟಾಗಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಕೊಡಲು ಬಂದ ಪ್ರಸಂಗ ಸೋಮವಾರ ವಿಧಾನಸೌಧದಲ್ಲಿ ನಡೆಯಿತು. ಈ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣರಿಂದ ಮನವೊಲಿಕೆ ಕಸರತ್ತು ಕೂಡ ನಡೆಯಿತು. ಕೊನೆಗೆ ಸ್ಪೀಕರ್ ಇಲ್ಲದ್ದಕ್ಕೆ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಲು ನಯನಾ ಯತ್ನಿಸಿದರು. ಆದರೆ ಅವರು ರಾಜೀನಾಮೆ ಸ್ವೀಕಾರಕ್ಕೆ ನಿರಾಕರಿಸಿದ ಕಾರಣ ಮಂಗಳವಾರ ಮತ್ತೆ ಬರುವೆ ಎಂದು ಶಾಸಕಿ ಹೇಳಿದ್ದಾರೆ
ಸಲಗ ಸಮರ
- ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ಆನೆ ಸ್ಥಳಾಂತರಕ್ಕೆ ಆಕ್ರೋಶ
- ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ಥಳೀಯರಿಂದ ಬೃಹತ್ ಪ್ರತಿಭಟನೆ
- ಶಿರವಾಸೆ-ತರೀಕೆರೆ ರಸ್ತೆ ತಡೆ, ಮೂಡಿಗೆರೆಯಲ್ಲಿ ಸರ್ವಪಕ್ಷಗಳ ಸಭೆ
- ಜನಾಕ್ರೋಶ ಕಾರಣ ಸ್ಥಳಾಂತರ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್


