ಮೂಡಿಗೆರೆಬೇಲೂರು ಭಾಗದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಮೂಡಿಗೆರೆ ತಾಲೂಕು ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ತಾಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾದ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸೋಮವಾರ ಪಟ್ಟಣದ ಅಡ್ಯಂತಾಯ ಸ್ಮಾರಕ ರಂಗಮಂದಿರದಲ್ಲಿ ಸಭೆ ನಡೆಸಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಖಂಡರು ಸಮಾಲೋಚನೆ । ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಮೂಡಿಗೆರೆಬೇಲೂರು ಭಾಗದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಮೂಡಿಗೆರೆ ತಾಲೂಕು ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ತಾಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾದ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸೋಮವಾರ ಪಟ್ಟಣದ ಅಡ್ಯಂತಾಯ ಸ್ಮಾರಕ ರಂಗಮಂದಿರದಲ್ಲಿ ಸಭೆ ನಡೆಸಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.ಸಭೆಗೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಖಂಡರು ಸಮಾಲೋಚನೆ ನಡೆಸಿದರು. ಈ ವೇಳೆ ಕೆಲವರು ಮೂಡಿ ಗೆರೆ ಬಂದ್ಗೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸಬೇಕೆಂದು ಒತ್ತಾಯಿಸಿದರೆ ಇನ್ನು ಕೆಲವರು ಡಿಸಿಎಫ್ ಸ್ಥಳಕ್ಕೆ ಆಗಮಿಸಿ ಜನರ ಅಭಿಪ್ರಾಯ ಆಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಡಿಸಿಎಫ್ ಬೋರಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಆಗಮಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅಡ್ಯಂತಾಯ ಸ್ಮಾರಕ ರಂಗಮಂದಿರದಲ್ಲಿ ನಡೆಸಲಾಯಿತು.ಸಭೆಯಲ್ಲಿ ಮಾತನಾಡಿದ ಡಿಸಿಎಫ್ ಬೋರಯ್ಯ, ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಾಳಿಗೆ ಕಾರಣವಾದ ಎರಡು ಕಾಡಾನೆಗಳನ್ನು ಸೆರೆಹಿಡಿ ಯಲಾಗಿತ್ತು. ಮತ್ತೆ ಮಾನವ-ಕಾಡಾನೆ ಸಂಘರ್ಷ ಮರುಕಳಿಸಬಾರದೆಂಬ ಉದ್ದೇಶದಿಂದ ಆನೆಗಳನ್ನು ಭದ್ರಾ ಅಭಯಾ ರಣ್ಯಕ್ಕೆ ಸ್ಥಳಾಂತರಿವು ಒತ್ತಾಯ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಹಾಸನ ಉಸ್ತುವಾರಿ ಸಚಿವರು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವಂತೆ ಸೂಚಿಸಿದ್ದರು. ಆದರೆ ಕಾರ್ಯಾಚರಣೆಗೂ ಮುನ್ನ ಮೂಡಿಗೆರೆ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.ಬೇಲೂರಿಂದ ಮೂಡಿಗೆರೆಗೆ ಬಂದಿರುವ ಕಾಡಾನೆಗಳನ್ನು ತಕ್ಕೊಳದಿಂದ ಸಾರಗೋಡು, ಕುಂದೂರು, ಬಸವನಕೋಟೆ ಹಾಗೂ ದೇವದಾನದ ಮೂಲಕ ಡ್ರೋನ್ಗಳು ಮತ್ತು ಅರಣ್ಯ ಸಿಬ್ಬಂದಿ ಕಾರ್ಯಪಡೆ ನೆರವಿನಿಂದ ಯಾವುದೇ ಅವಘಡ ಸಂಭವಿಸದಂತೆ ಭದ್ರಾ ಅರಣ್ಯಕ್ಕೆ ಓಡಿಸಲು ಯೋಜಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಕಾಡಾನೆಗಳು ಯಾವ ದಿಕ್ಕಿನಲ್ಲಿ ಸಾಗುತ್ತ ವೆಯೋ ಅದೇ ದಿಕ್ಕಿನಲ್ಲಿ ತೆರಳಲು ಬಿಡಲಾಗಿದೆ. ತಾಲೂಕಿನ ಜನರು ಸಹಕಾರ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮಾಡಲಾಗುವುದು ಎಂದರು.ಇದಕ್ಕೆ ಸಭೆಯಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಾಕೋನಹಳ್ಳಿ ಭಾಗದ ರೈತರು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದರೆ, ತಕ್ಕೊಳ ಮತ್ತು ಕುಂದೂರು ಭಾಗದ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆನೆಗಳನ್ನು ಓಡಿಸುವ ಬದಲು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಕೆಲವರು ಆಗ್ರಹಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪರ-ವಿರೋಧದ ಅಭಿಪ್ರಾಯಗಳಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರು ಸಚಿವರೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಬಳಿಕ ಮಾತನಾಡಿದ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮೂಡಿಗೆರೆ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಪಕ್ಷೀಯವಾಗಿ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮುಂದುವರಿಸಿದರೆ ರಸ್ತೆ ತಡೆ ನಡೆಸುವುದರ ಜತೆಗೆ ಮೂಡಿಗೆರೆ ಬಂದ್ಗೆ ಕರೆ ನೀಡಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು ಸಮ್ಮತಿಸಿ ಮುಂದಿನ ಬೆಳವಣಿಗೆ ಗಮನಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಯಿತು.ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬಿ.ಎಸ್.ಜಯರಾಂಗೌಡ, ಶಿವಣ್ಣ, ಎಂ.ಎನ್.ಅಶ್ವಥ್, ಸಿದ್ದಯ್ಯ ವಕೀಲರು, ಬಿ.ಆರ್.ಭಾಲಕೃಷ್ಣ, ಎಂ.ಪಿ.ಮನು, ಜಿ.ಹೆಚ್.ಹಾಲಪ್ಪಗೌಡ, ಬಿ.ಕೆ.ಲಕ್ಷ್ಮಣ್ ಕುಮಾರ್, ಕೆ.ಆರ್.ಸುಂದ್ರೇಶ್, ಪಿ.ಜಿ. ಅನುಕುಮಾರ್, ಕುನ್ನಳ್ಳಿ ರವಿ, ಡಿ.ಎಸ್.ರಘು, ವಿಭಾ ಸುಷ್ಮಾ, ವಿಜಯ್ಕುಮಾರ್, ಬ್ರಿಜೇಶ್ ಕಡಿದಾಳ್, ಪ್ರಸಾದ್ ಬಕ್ಕಿ, ಭರತ್ ಬಾಳೂರು, ಬಿ.ಸಿ.ದಯಾಕರ್ ಸೇರಿದಂತೆ ಹಲವು ಮುಖಂಡರು,ಸಾರ್ವಜನಿಕರು ಉಪಸ್ಥಿತರಿದ್ದರು.
