Rajyotsava Shakti' Award for Bhimashankar

ಅಫಜಲಪುರ: ಕರ್ನಾಟಕ ಯುವ ಶಕ್ತಿ ರೈತ ಮಕ್ಕಳ ಮಹಾಶಕ್ತಿ ಸಂಘಟನೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ಪ್ರತಿಷ್ಠಿತ ರಾಜ್ಯೋತ್ಸವ ಶಕ್ತಿ ಪ್ರಶಸ್ತಿಗೆ ತಾಲೂಕಿನ ಬಡದಾಳ ಗ್ರಾಮದ ರೈತ ಹೋರಾಟಗಾರ ಹಾಗೂ ಸ್ವಯಂ ನಿವೃತ್ತ ಪಶುವೈದ್ಯಕೀಯ ಪರೀಕ್ಷಕ ಭೀಮಾಶಂಕರ ಎನ್. ಜಮಾದಾರ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ಸಂಸ್ಥಾಪಕ ಅವ್ವಣ್ಣಗೌಡ ತಿಳಿಸಿದರು. ನ. 29ರಂದು ತಾಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿ ನಡೆಯಲಿರುವ ನಂದಿ ಧಾಮ ಗೋಶಾಲೆಯ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮತ್ತು ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಸೇರಿದಂತೆ ಹಲವು ಹರಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರಿ ಪಶುವೈದ್ಯಕೀಯ ಪರೀಕ್ಷಕರಾಗಿ 31 ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಭೀಮಾಶಂಕರ ಜಮಾದಾರ, ಬಡದಾಳ ಗ್ರಾಮದಲ್ಲಿ ಸಂಪತ್ ಹೈನುಗಾರಿಕೆ ಸಂಸ್ಥೆ ಸ್ಥಾಪಿಸಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಮೂಕಪ್ರಾಣಿಗಳ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಹೈನುಗಾರಿಕೆ ಮತ್ತು ಕುರಿಸಾಕಾಣಿಕೆಯ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಹಲವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಅವರ ಈ ಸಾಮಾಜಿಕ ಸೇವೆ, ರೈತಪರ ಕಾಳಜಿ ಹಾಗೂ ಪಶುಸಂಗೋಪನಾ ಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವ್ವಣ್ಣಗೌಡ ತಿಳಿಸಿದರು‌‌.