ಶಿರಹಟ್ಟಿ: ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬಗಳ ಆಚರಣೆ ವೇಳೆ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಿಎಸ್‌ಐ ಈರಪ್ಪ ರಿತ್ತಿ ಎಚ್ಚರಿಕೆ ನೀಡಿದರು.ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ, ಪ್ರತಿ ಧರ್ಮದ ಹಬ್ಬದ ಹಿಂದೆ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಹಬ್ಬ ಹರಿದಿನಗಳಿಗೆ ಅರ್ಥ ಬರುತ್ತದೆ. ಹೀಗಾಗಿ ಹೋಳಿ ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯಿಂದ ಆಚರಿಸಬೇಕು ಎಂದರು.
ರೋಣ: ರೇಣುಕಾಚಾರ್ಯರು ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ದೈನಂದಿನ ಜೀವನದ ಭಾಗವನ್ನಾಗಿಸಲು ಶ್ರಮಿಸಿದರು ಎಂದು ಮುಖಂಡ ವಿ.ಬಿ. ಸೋಮನಕಟ್ಟಿಮಠ ತಿಳಿಸಿದರು.ಭಾನುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು. ಇಂತಹ ಮಹಾನ್ ಶಿವಭಕ್ತರ ಗುಣದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶುದ್ಧ ಮನಸ್ಸಿನಿಂದ ಪೂಜಿಸಬೇಕು ಎಂದರು.ರೇಣುಕಾಚಾರ್ಯರು ಎಲ್ಲ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದರು. ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದರು. ಎಲ್ಲ ವರ್ಣಗಳೂ ಸಮಾನವೆಂದು ಹೇಳಿದರು. ರೇಣುಕಾಚಾರ್ಯರು ವಚನಗಳ ಮೂಲಕ ತಮ್ಮ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ ಕೆ. ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ರೇವಣಸಿದ್ದಯ್ಯ ಹಿರೇಮಠ, ವಿ.ಜಿ. ಜಾವುರಮಠ, ಜಗದೀಶ ಹಿರೇಮಠ, ಸಂಗಯ್ಯ ನೀರಲಗಿಮಠ, ವೀರಯ್ಯ ನೆಲ್ಲೂರುಮಠ, ಆನಂದ ಹಿರೇಮಠ, ಸೋಮು ಲದ್ದಿಮಠ ಇತರರು ಇದ್ದರು.