ಕನ್ನಡಪ್ರಭ ವಾರ್ತೆ ಮಡಿಕೇರಿ
ಮದೆ ಗ್ರಾಮ ಪಂಚಾಯಿತಿಯ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತ ದುರ್ದೈವಿ. ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ಶನಿವಾರ ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಮನೆಗೆ ಹೋಗುವ ದಾರಿಯಲ್ಲಿ ಏಕಏಕಿ ಆನೆಯೊಂದು ದಾಳಿ ನಡೆಸಿದ್ದು ಪೂಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಯುವತಿಯ ಶವವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ನಂತರ ಗ್ರಾಮಕ್ಕೆ ಕೊಂಡೊಯ್ಯಲಾಯಿತು.ಗ್ರಾಮಸ್ಥರ ಆಕ್ರೋಶ: ಈ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟ್ಟುತೂರು ಗ್ರಾಮಸ್ಥರು, ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಗೆ ಆಗಸ್ಟ್ 14ರಂದು ಊರಿನವರೆಲ್ಲ ಸೇರಿ ಆ ಭಾಗದಲ್ಲಿ ಆನೆ ಹಾವಳಿ ತಡೆಗಟ್ಟುವಂತೆ ಲಿಖಿತ ದೂರು ನೀಡಿದ್ದರು. ಒಂದು ಬಾರಿ ಗ್ರಾಮಕ್ಕೆ ಬಂದು ಹೋದ ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸುವಲ್ಲಿ ಪ್ರಯತ್ನಿಸಿಲ್ಲ. ಈ ಭಾಗದಲ್ಲಿ ಕಾಡಾನೆ ಓಡಾಡುತ್ತಿದ್ದು ಕಾಫಿ ತೋಟಗಳಲ್ಲಿ ಕಾಫಿ ಮತ್ತು ತೋಟ ಕೆಲಸ ಮಾಡಿಸಲು ಕೂಡ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರು ಕೂಡ ಈ ಭಾಗದ ಜನರಿಗೆ ಯಾವುದೇ ರೀತಿಯ ಅನುಕೂಲವನ್ನು ಕಲ್ಪಿಸಿಲ್ಲ. ಇದೀಗ ಆನೆ ದಾಳಿಯಿಂದ ಊರಿನ ವಿದ್ಯಾರ್ಥಿನಿ ಒಬ್ಬಳು ಮೃತಪಟ್ಟಿದ್ದಾಳೆ.
ಶನಿವಾರ ಸಂಜೆ ಮಡಿಕೇರಿ ತಾಲೂಕಿನ ಬೆಟ್ಟತ್ತುರು ಗ್ರಾಮದಲ್ಲಿ ಆನೆ ದಾಳಿಗೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಬೆಟ್ಟತ್ತೂರು ಗ್ರಾಮಸ್ಥರು ಮಡಿಕೇರಿ ಮಂಗಳೂರು ಹೆದ್ದಾರಿ ಮದೆ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಆನೆ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಹೆದ್ದಾರಿ ರಸ್ತೆ ತಡೆ ನಡೆಸಲಾಗಿದ್ದು, ಸರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಪೂರೈಸಲು ಒಂದು ವಾರದ ಗಡುವು ನೀಡಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.