ಬ್ರಾಹ್ಮಣ ಸಮಾಜದಿಂದ ಶಂಕರಾಚಾರ್ಯರ ಜಯಂತಿ ಆಚರಣೆ

KannadaprabhaNewsNetwork | Published : May 15, 2024 1:31 AM

ಸಾರಾಂಶ

ಲೋಕ ಕಲ್ಯಾಣಾರ್ಥವಾಗಿ ಜನ್ಮತೆಳೆದು ಅತೀ ಕಡಿಮೆ ವಯಸ್ಸಿನಲ್ಲಿ ಮಹತ್ತರವಾದುದ್ದನ್ನು ಸಾಧಿಸಿ ಸನಾತನ ಧರ್ಮವನ್ನು ಸಂರಕ್ಷಿಸಿ ಜಗತ್ತಿಗೆ ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಚಿಂತನೆಯನ್ನು ಆಚಾರ್ಯ ಶಂಕರರು ನೀಡಿದ್ದಾರೆ. ಪುರಾಣ, ಉಪನಿಷತ್ತು ಹಾಗೂ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಹೊಸ ಭಾಷ್ಯೆ ಬರೆದು ಸಂರಕ್ಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಈಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿಯನ್ನು ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು.

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಮಾಜದ ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯ ವಿಪ್ರರು ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜಾ ವಿಧಿಗಳಲ್ಲಿ ಭಾಗವಹಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಆನಂತರ ಶಂಕರಾಚಾರ್ಯರ ಪಟವನ್ನು ಅಲಂಕೃತ ವಾಹನದಲ್ಲಿಟ್ಟು ಸಿಂಗರಿಸಿ ಪಟ್ಟಣದ ರಾಜಬೀದಿಯಲ್ಲಿ ವೇದ ಘೋಷಗಳೊಂದಿಗೆ ಧಾರ್ಮಿಕ ಚಿಂತಕರಾದ ಗೋಪಾಲಕೃಷ್ಣ ಅವದಾನಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಶಂಕರಾಚಾರ್ಯರ ಜಯಂತಿ ಅಂಗವಾಗಿ ಈಶ್ವರ ದೇವಾಲಯದಲ್ಲಿ ಭಜನೆ. ವೇದಘೋಷದ ಜೈಕಾರಗಳು ಮೊಳಗಿದವು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಗೋಪಾಲಕೃಷ್ಣ ಅವದಾನಿ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಜನ್ಮತೆಳೆದು ಅತೀ ಕಡಿಮೆ ವಯಸ್ಸಿನಲ್ಲಿ ಮಹತ್ತರವಾದುದ್ದನ್ನು ಸಾಧಿಸಿ ಸನಾತನ ಧರ್ಮವನ್ನು ಸಂರಕ್ಷಿಸಿ ಜಗತ್ತಿಗೆ ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಚಿಂತನೆಯನ್ನು ಆಚಾರ್ಯ ಶಂಕರರು ನೀಡಿದ್ದಾರೆ ಎಂದರು.

ಪುರಾಣ, ಉಪನಿಷತ್ತು ಹಾಗೂ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಹೊಸ ಭಾಷ್ಯೆ ಬರೆದು ಸಂರಕ್ಷಿಸಿದ್ದಾರೆ. ಶಂಕರಾಚಾರ್ಯಯರ ತತ್ವಗಳಿಂದಲೇ ಸನಾತನಧರ್ಮ ಇಂದು ಪ್ರಜ್ವಲವಾಗಿ ಅರಳಲು ಸಾಧ್ಯವಾಗಿದೆ. ಆಚಾರ್‍ಯತ್ರಯರಾದ ಶಂಕರಾಚಾರ್ಯ, ರಾಮಾನುಜಚಾರ್ಯ ಮತ್ತು ಮದ್ವಾಚಾರ್ಯರು ಸನಾತನ ಧರ್ಮದ ನೀತಿ ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸಿದ ಮಹನೀಯರು ಎಂದರು.

ಈ ವೇಳೆ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಘುರಾಮ್ ನಾಡಿಗ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀರಾಮಮಂದಿರದ ಅಧ್ಯಕ್ಷ ಅನಂತರಾಮಯ್ಯ, ಮುಖಂಡರಾದ ರಾಮಚಂದ್ರು, ಹಿರಣ್ಣಯ್ಯ, ಸಂಧ್ಯಾ ಮಾರ್ತಾಂಡ, ಮುರುಗೇಶ್, ಗುರುದತ್ತ, ರಾಜಾರಾಮ್ ಬಾಲಸುಬ್ರಹ್ಮಣ್ಯ, ರವಿ. ಮಂಜುನಾಥ್, ಅರ್ಚಕರಾದ ರೋಹಿತ್ ಶರ್ಮ, ಮಾಲತೇಶ್‌ಭಟ್, ಹೊಸಹೊಳಲು ಸೋಮಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article