ಉದ್ಯಾನಗರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ

KannadaprabhaNewsNetwork | Published : Nov 1, 2024 12:37 AM

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಉದ್ಯಾನ ನಗರಿ ಜಗಮಗಿಸುತ್ತಿದೆ. ಇಂದು ಹಬ್ಬದ ವಿಶೇಷ ಪೂಜೆ ಜರುಗಲಿದೆ. ದರ ಏರಿಕೆಯ ನಡುವೆಯೂ ಹಬ್ಬದ ಖರೀದಿ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಉದ್ಯಾನ ನಗರಿ ಜಗಮಗಿಸುತ್ತಿದೆ. ಇಂದು ಹಬ್ಬದ ವಿಶೇಷ ಪೂಜೆ ಜರುಗಲಿದೆ. ದರ ಏರಿಕೆಯ ನಡುವೆಯೂ ಹಬ್ಬದ ಖರೀದಿ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ನರಕಚತುರ್ದಶಿ, ಅಮಾವಸ್ಯೆ ಹಿನ್ನೆಲೆಯಲ್ಲಿ ಅಂಗಡಿಕಾರರು ಸೇರಿ ಮನೆಗಳಲ್ಲಿ ಗುರುವಾರ ಲಕ್ಷ್ಮೀಪೂಜೆ ನೆರವೇರಿಸಿದ್ದಾರೆ. ಅಂಗಡಿಗಳನ್ನು ಅಲಂಕರಿಸಿ ಲಕ್ಷ್ಮೀ ದೇವಿ ಪ್ರತಿಷ್ಠಾಪಿಸಿ ಅದ್ಧೂರಿ ಪೂಜೆಗಳು ನಡೆಸಲಾಗಿದೆ. ಜೊತೆಗೆ ವಾಹನ, ಯಂತ್ರೋಪಕರಣ, ಸಲಕರಣೆಗಳ ಪೂಜೆ ನಡೆಯಿತು. ಇಂದು ದೀಪಾವಳಿ ಹಬ್ಬದ ವಿಶೇಷ ಪೂಜೆ, ಕೇದಾರೇಶ್ವರ ವೃತವನ್ನು ಕೈಗೊಳ್ಳಲಿದ್ದು, ಶನಿವಾರ ಗೋಪೂಜೆ ಸೇರಿ ಇತರೆ ಆಚರಣೆಗಳು ನಡೆಯಲಿವೆ. ಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ವಿದ್ಯುದೀಪಾಲಂಕಾರ ಮಾಡಲಾಗಿದ್ದು, ಮನೆ, ದೇವಸ್ಥಾನಗಳನ್ನು ಆಕಾಶಬುಟ್ಟಿ, ಹಣತೆಗಳ ಸಾಲು ಬೆಳಗುತ್ತಿವೆ. ಇನ್ನು, ಮಕ್ಕಳಾದಿಯಾಗಿ ಮಹಿಳೆಯರು, ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಬ್ಬದ ಪ್ರಯುಕ್ತ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದೆರಡು ದಿನಗಳಿಂದಲೂ ಜನಜಂಗುಳಿಯಿದೆ. ಹಬ್ಬಕ್ಕಾಗಿ ಪೂಜಾ ಸಾಮಗ್ರಿಗಳು, ಜವಳಿ, ಹೂವು, ಹಣ್ಣು, ಪಟಾಕಿ ವ್ಯಾಪಾರದ ಭರಾಟೆ ಜೋರಾಗಿದೆ. ಗುರುವಾರ ನಗರದ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಅವೆನ್ಯೂ ರೋಡ್‌ ಸೇರಿ ಚಿಕ್ಕಪೇಟೆವರೆಗೂ ಸಂಚಾರ ದಟ್ಟಣೆ ವಿಪರೀತವಾಗಿತ್ತು.

ಇದರ ಜೊತೆಗೆ ಗಾಂಧಿ ಬಜಾರ್, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ, ಕೆ.ಆರ್. ಪುರ, ಬನಶಂಕರಿ ಮಾರುಕಟ್ಟೆಗಳಲ್ಲಿಯೂ ಹೂವು-ಹಣ್ಣುಗಳ ಖರೀದಿ ನಡೆಯುತ್ತಿದೆ.

ಮಳೆಯಿಂದ ಇಳಿದ ಹೂವಿನ ದರ:

ಮಳೆ ಕಾರಣದಿಂದ ಹೂವುಗಳು ಕೊಳೆತಿರುವ, ಗುಣಮಟ್ಟ ಕುಸಿದಿರುವ ಕಾರಣ ಬೆಲೆಯೂ ಕೊಂಚ ಕಡಿಮೆಯಿತ್ತು. ಬೆಳಗ್ಗೆ ದರ ಹೆಚ್ಚಿದ್ದರೂ ಸಂಜೆ ವೇಳೆಗೆ ಬೆಲೆ ಇಳಿಕೆಯಾಗಿತ್ತು ಎಂದು ಹೂವಿನ ವ್ಯಾಪಾರಿ ದಿವಾಕರ್‌ ತಿಳಿಸಿದರು. ಒಂದು ಕೆ.ಜಿ. ಸೇವಂತಿಗೆ ಹೂವಿಗೆ ₹160ರಿಂದ ₹300 ಇದ್ದರೆ, ಗುಲಾಬಿ ₹300, ಮಲ್ಲಿಗೆ ₹1,000, ಕನಕಾಂಬರ ₹1,200, ಚೆಂಡು ಹೂವು ಮಾರಿಗೆ ₹150 ಇತ್ತು.

ಹಣ್ಣು ತರಕಾರಿ:

ಹಣ್ಣು ತರಕಾರಿಗಳ ದರ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಒಂದು ಕೆಜಿ ಸೇಬಿಗೆ ₹150- ₹180, ದ್ರಾಕ್ಷಿ ₹90, ಕಿತ್ತಳೆ ₹50, ಅನಾನಸ್ ₹60, ದಾಳಿಂಬೆ ₹150 - ₹200, ಸಪೋಟ ₹65, ಏಲಕ್ಕಿ ಬಾಳೆ ಹಣ್ಣು ₹115, ಮೂಸಂಬಿ ₹60, ಸೀತಾಫಲ ₹50 ಮಾರಾಟವಾಗಿದೆ.

ಒಂದು ಕೇಜಿ ಆಲೂಗಡ್ಡೆಗೆ ₹40, ಈರುಳ್ಳಿ ₹70, ಕ್ಯಾರೆಟ್ ₹60, ಟೊಮೆಟೋ ₹60, ಮೆಣಸಿನಕಾಯಿ ₹80, ಸೌತೆಕಾಯಿ ₹40, ಬೀನ್ಸ್‌ ₹150 ದರವಿತ್ತು.ಹಣತೆ, ಪಟಾಕಿ:

ದೀಪಾವಳಿ ವಿಶೇಷವಾದ ಹಣತೆ ಡಜನ್‌ಗೆ ₹50 - ₹60 ಇದ್ದರೆ, ಮಧ್ಯಮ ಗಾತ್ರದ ಮಣ್ಣಿನ ಹಣತೆಗೆ ₹100ರಿಂದ ₹120 ಮಾರಾಟ ಮಾಡಲಾಗುತ್ತಿದೆ. ಅದರಂತೆ ಬಗೆಬಗೆಯ ವಿನ್ಯಾಸದ ಆಕಾಶಬುಟ್ಟಿ ₹150 ₹2,500 ವರೆಗೆ ಮಾರಾಟವಾಗುತ್ತಿದೆ.

Share this article