ಶಿರಸಿ: ಹಿಂದೂಗಳ ಸಾಂಪ್ರದಾಯಿಕ ಹಬ್ಬವಾದ ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿ ಹಬ್ಬವನ್ನು ನಗರ ಸೇರಿದಂತೆ ತಾಲೂಕಿನಾದ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದರು.ದೀಪಾವಳಿಯ ಬೆಳಗ್ಗೆ ಕೃಷಿಕರು ಯಾವುದೇ ಆಹಾರ ಸೇವಿಸದೆ, ಹಿಂದಿನ ದಿನ ತಯಾರಿಸಿಟ್ಟ ಅಡಕೆ ಹಾರ, ಪುಂಡಿ ನಾರಿನ ದಾಬುಗಳ ಜತೆಗೆ ತೆಂಗಿನಕಾಯಿ, ಸಿಂಗಾರ, ಪಚ್ಚೆತೆನೆ, ಹಾಲು, ಆಗಷ್ಟೇ ಕಾಯಿಸಿ ಮಾಡಿದ ತುಪ್ಪ, ಪೂಜಾ ಪರಿಕರಗಳ ಜತೆ ಬರಿಗಾಲಲ್ಲಿ ಹುಲಿಯಪ್ಪನ ಸನ್ನಿಧಿಗೆ ತೆರಳಿದರು.
ಕಾರವಾರ: ಮನೆ ಮನೆಗಳಿಗೂ ಬೆಳಕಿನ ಸಿಂಗಾರ, ಅಂಗಡಿ ಮಳಿಗೆಗಳಲ್ಲಿ ಪೂಜೆಯ ಸಡಗರ, ಗೋಪೂಜೆಯ ಸಂಭ್ರಮದೊಂದಿಗೆ ದೀಪಾವಳಿ ಆಚರಣೆ ನಡೆಯಿತು.ದೀಪಾವಳಿ ಬೆಳಕಿನ ಹಬ್ಬ. ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಮನೆ ಮನೆಯನ್ನು, ಅಂಗಡಿ ಮಳಿಗೆಗಳನ್ನು ಸಿಂಗರಿಸಲಾಗಿತ್ತು. ಪೇಟೆ, ಪಟ್ಟಣಗಳಲ್ಲಿ ಮೋಹಕ ವಿದ್ಯುದ್ದೀಪಗಳು ಹೊಸ ಕಳೆ ತಂದಿದ್ದವು. ಅಂಗಡಿ ಮಳಿಗೆಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಲಕ್ಷ್ಮೀಪೂಜೆ ಆಚರಿಸಲಾಯಿತು.ಮನೆ ಮನೆಗಳಲ್ಲೂ ಬಲೀಂದ್ರ ಪೂಜೆ ನೆರವೇರಿಸಲಾಯಿತು. ಗೋಪೂಜೆಯ ಸಂಭ್ರಮ ಕಳೆಗಟ್ಟಿತ್ತು. ಬಣ್ಣಗಳನ್ನು ಬಳಿದು, ಹೂವು, ಅಡಕೆಗಳಿಂದ ಗೋವನ್ನು ಸಿಂಗರಿಸಿ, ಗೋಗ್ರಾಸ ನೀಡಿ ಪೂಜೆ ಸಲ್ಲಿಸಲಾಯಿತು.
ದೀಪಾವಳಿ ಹಬ್ಬದಲ್ಲಿ ಗೃಹಬಳಕೆ ವಸ್ತುಗಳು, ಬಟ್ಟೆಗಳು ಮತ್ತಿತರ ವಸ್ತುಗಳಿಗೆ ಡಿಸ್ಕೌಂಟ್ ಘೋಷಿಸಿದ್ದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿತ್ತು. ಜನತೆ ಹೊಸ ಬಟ್ಟೆಗಳನ್ನು ಧರಿಸಿ, ಆಪ್ತರು, ಬಂಧು ಬಾಂಧವರಿಗೆ ಪರಸ್ಪರ ಸಿಹಿ ನೀಡಿ ಶುಭಾಶಯಗಳನ್ನು ಸಲ್ಲಿಸಿದರು. ಜಿಲ್ಲೆಯ ಜನತೆ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.