ಗದಗ: ಗದಗ, ಬೆಟಗೇರಿ ನಗರಸಭೆ ಕಾರ್ಯಾಲಯದಲ್ಲಿ 12ನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಹನ್ನೆರಡನೇ ಶತಮಾನದ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದ ಹಡಪದ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಂತಹ ಗೌರವಾನ್ವಿತ ಸ್ಥಾನ ಹೊಂದಿದ್ದರು. ತಮ್ಮ ಕ್ಷೌರಿಕ ವೃತ್ತಿಯನ್ನು ಕೇವಲ ಹೊಟ್ಟೆಪಾಡಿಗೆ ಸೀಮಿತಗೊಳಿಸದೆ, ಕಾಯಕವೇ ಕೈಲಾಸ ಎಂಬ ತತ್ವದಂತೆ ಶಿವಸೇವೆ ಎಂದು ಬಾಳಿದವರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿ ಲೇಖಾಧೀಕ್ಷಕ ಟಿ.ಎಚ್. ದ್ಯಾವನೂರ, ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಶ್ರೀಶೈಲ ಸಂಕನಗೌಡ್ರ, ಮೊಹ್ಸಿನ ಮುಜಾವರ, ಎಂ.ಆರ್. ಪಾಟೀಲ, ರಮೇಶ ನಾಗಲೀಕರ, ಕಂ. ನಿರೀಕ್ಷಕಿ ಸಾವಿತ್ರಿ ಮಳ್ಳಿ, ಪುಷ್ಪಲತಾ ಕಡೇಮನಿ, ಪರಿಸರ ಅಭಿಯಂತರ ಆನಂದ ಬದಿ, ಡಿ.ಎಚ್. ಸೀತಿಮನಿ ಹಾಗೂ ನಗರಸಭೆಯ ಹಿರಿಯ-ಕಿರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಪ್ಪಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳಲಿ: ಬಸವರಾಜ ಸುಂಕಾಪುರಮುಳಗುಂದ: ಸಮಾಜದಲ್ಲಿ ಸಮಾನತೆ, ಸತ್ಯ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಮಹಾನ್ ಶರಣರು ನಿಜ ಸುಖಿ ಹಡಪದ ಅಪ್ಪಣ್ಣನವರು. ಅವರ ಆದರ್ಶ ಮೌಲ್ಯಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸೋಣ ಎಂದು ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ತಿಳಿಸಿದರು.ಪಟ್ಟಣದ ಶ್ರೀ ಹಡಪದ ಅಪ್ಪಣ್ಣನವರ ಸಭಾ ಭವನದಲ್ಲಿ ಸಮಾಜದ ವತಿಯಿಂದ ನಡೆದ ನಿಜ ಸುಖಿ ಶ್ರೀಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟು ಒಂದೇ ಮಾರ್ಗ, ಸಮಾಜದ ಎಲ್ಲರೂ ಒಗ್ಗೂಡಿಕೊಂಡ ಇನ್ನೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿ ಸಮಾಜ ನಿರ್ಮಾಣ ಮಾಡಬೇಕು ಎಂದರು.ಡಾ. ಎಸ್.ಸಿ. ಚವಡಿ ಮಾತನಾಡಿ, ಶ್ರೀ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ನಿಷ್ಠೆಯಿಂದ ಜವಾಬ್ದಾರಿ ನಿರ್ವಹಿಸಿದ್ದರು. ಅಗಾಧವಾದ ಶಕ್ತಿಯುಳ್ಳ, ಮಹಾಜ್ಞಾನಿಗಳು ಅಪ್ಪಣನವರು. ಸಮಾಜದ ಬದಲಾವಣೆಗಾಗಿ ಶರಣರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಬಗೆಗೆ ಇಂದಿನ ಮಕ್ಕಳಿಗೆ ತಿಳಿಸುವ ಕೆಲಸವನ್ನ ಸಮಾಜ ಮಾಡಬೇಕು ಎಂದರು.